ಸಾರಾಂಶ
- ಆರೋಪಿ ಜೊತೆ ಕುಂಭಮೇಳದ ಫೋಟೋ ವೈರಲ್- ಕೊಲೆಯಾದವ, ಆರೋಪಿ ಇಬ್ರೂ ಗೊತ್ತಿಲ್ಲ: ಬೈರತಿ ಬಸವರಾಜ್
====ಕೊಲೆಗೂ ನನಗೂ
ಸಂಬಂಧವಿಲ್ಲನನಗೂ, ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಕೊಲೆಯಾದವನು ಮತ್ತು ಕೊಲೆ ಮಾಡಿದ ಆರೋಪಿಗಳು ನನಗೆ ಗೊತ್ತಿಲ್ಲ. ರಾಜಕೀಯ ದುರುದ್ದೇಶದಿಂದ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಎಫ್ಐಆರ್‌ನಿಂದ ನನ್ನ ಹೆಸರು ತೆಗೆಯಲು ಕಾನೂನು ಹೋರಾಟ ಮಾಡುತ್ತೇನೆ.- ಬೈರತಿ ಬಸವರಾಜ್, ಬಿಜೆಪಿ ಶಾಸಕ
=ಕನ್ನಡಪ್ರಭ ವಾರ್ತೆ ಬೆಂಗಳೂರು
ಭೂ ವಿವಾದ ಹಿನ್ನೆಲೆಯಲ್ಲಿ ನಡೆದಿದೆ ಎನ್ನಲಾದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ, ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಸೇರಿ ಐವರ ವಿರುದ್ಧ ಭಾರತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ನಡುವೆ ಕೊಲೆಯಾದವನು ಮತ್ತು ಕೊಲೆ ಮಾಡಿದ ಆರೋಪಿಗಳು ಇಬ್ಬರೂ ನನಗೆ ಗೊತ್ತಿಲ್ಲ ಎಂದು ಬೈರತಿ ಬಸವರಾಜ್ ಸ್ಪಷ್ಟೀಕರಣ ನೀಡಿದ್ದು, ಇದರ ಬೆನ್ನಲ್ಲೇ ಪ್ರಯಾಗರಾಜ್‌ನಲ್ಲಿ ಇತ್ತೀಚೆಗೆ ನಡೆದಿದ್ದ ಕುಂಭಮೇಳದಲ್ಲಿ ಪ್ರಮುಖ ಆರೋಪಿ ಹೆಣ್ಣೂರು ಜಗದೀಶ್ ಅಲಿಯಾಸ್ ಜಗ್ಗನ ಜತೆಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಶಾಸಕರಿಗೆ ಸಂಕಷ್ಟ ತಂದಿಟ್ಟಿದೆ.
ಮೃತನ ತಾಯಿ ದೂರು:ಶಾಸಕ ಬಸವರಾಜು, ಅವರ ಬೆಂಬಲಿಗರು ಎನ್ನಲಾದ ಜಗದೀಶ್, ಕಿರಣ್, ವಿಮಲ್, ಅನಿಲ್ ವಿರುದ್ಧ ಆರೋಪ ಕೇಳಿಬಂದಿದ್ದು, ಮೃತನ ತಾಯಿ ವಿಜಯಲಕ್ಷ್ಮೀ ಅವರು ನೀಡಿದ ದೂರಿನ್ವಯ ಎಫ್‌ಐಆರ್ ದಾಖಲಾಗಿದೆ. ಕಿತಗನೂರಿನ ಭೂಮಿ ವಿಚಾರವಾಗಿ ತನ್ನ ಮಗ ಶಿವಪ್ರಕಾಶ್‌ನನ್ನು ಶಾಸಕರ ಕುಮ್ಮಕ್ಕಿನಿಂದಲೇ ಹತ್ಯೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರಕರಣದಲ್ಲಿ ಬೈರತಿ ಬಸವರಾಜು ಹೆಸರು 5ನೇ ಆರೋಪಿಯಾಗಿ ಉಲ್ಲೇಖವಾಗಿದೆ.
ಹಲಸೂರು ಕೆರೆ ಸಮೀಪದ ತನ್ನ ಮನೆ ಮುಂದೆ ಮಂಗಳವಾರ ರಾತ್ರಿ ನಿಂತಿದ್ದಾಗ ಭಾರತಿನಗರದ ರೌಡಿ ಶಿವಪ್ರಕಾಶ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದರು.ಎಫ್‌ಐಆರ್‌ನಲ್ಲೇನಿದೆ?:
ನನ್ನ ಮಗ ಎಕ್ಸ್‌ಟೈಮ್ ಪಾಯಿಂಟ್ ಹೆಸರಿನ ರಿಯಲ್ ಎಸ್ಟೇಟ್ ಸಂಸ್ಥೆಯನ್ನು ಪಾಲುದಾರಿಕೆಯಲ್ಲಿ ನಡೆಸುತ್ತಿದ್ದ. 2023ರಲ್ಲಿ ಕಿತ್ತಗನೂರಿನಲ್ಲಿ ಭೂಮಿ ಖರೀದಿಸಿ ಜಿಪಿಎ ಮಾಡಿಸಿದ್ದ. ಆ ಸ್ವತ್ತಿನ ಕಾವಲಿಗೆ ಇಬ್ಬರು ಮಹಿಳಾ ಸೆಕ್ಯುರಿರಿಟಿ ಗಾರ್ಡ್‌ಗಳನ್ನು ನೇಮಿಸಿ ತಾತ್ಕಾಲಿಕ ಶೆಡ್ ಸಹ ನಿರ್ಮಿಸಲಾಗಿತ್ತು. ಆದರೆ ಆ ಭೂಮಿಗೆ 2025ರ ಫೆ.11 ರಂದು ಜಗದೀಶ್ ಹಾಗೂ ಕಿರಣ್ ಅತಿಕ್ರಮವಾಗಿ ಪ್ರವೇಶಿಸಿದ್ದರು. ಇದಕ್ಕೆ ಮಹಿಳಾ ಕಾವಲುಗಾರರು ವಿರೋಧಿಸಿದಾಗ ಜಗಳವಾಗಿತ್ತು. ಬಳಿಕ ನನ್ನ ಮಗನಿಗೆ ಜಗದೀಶ್ ಕರೆ ಮಾಡಿ ನನ್ನ ಏರಿಯಾದ ಸ್ವತ್ತು ನನಗೆ ಜಿಪಿಎ ಮಾಡಿಕೊಡು, ಇಲ್ಲದಿದ್ದರೆ ನಿನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಮೃತನ ತಾಯಿ ಆರೋಪಿಸಿದ್ದಾರೆ.ಆದರೆ ತಾನು ಜಿಪಿಎ ಮಾಡಿಕೊಡುವುದಿಲ್ಲ ಎಂದು ಪುತ್ರ ಹೇಳಿದ್ದ. ಇದೇ ಭೂಮಿ ವಿಚಾರವಾಗಿ ನನ್ನ ಮಗನಿಗೆ ನಿರಂತರ ಜೀವ ಬೆದರಿಕೆ ಕರೆಗಳು ಬರುತ್ತಿದ್ದವು. ಆಗ ಶಾಸಕ ಬೈರತಿ ಬಸವರಾಜು, ಜಗದೀಶ್ ಹಾಗೂ ಕಿರಣ್ ವಿರುದ್ಧ ಪೊಲೀಸರಿಗೂ ದೂರು ಕೊಡಲಾಗಿತ್ತು. ಕೊಲೆ ಬೆದರಿಕೆ ಬಗ್ಗೆ ಮನೆಯಲ್ಲಿ ಆಗಾಗ್ಗೆ ಮಗ ಮಾತನಾಡುತ್ತಿದ್ದ. ರಾತ್ರಿ ಹೊರ ಹೋಗಲೆಂದು ಕಾರು ಚಾಲಕ ಇಮ್ರಾನ್ ಹಾಗೂ ಸ್ನೇಹಿತ ಲೋಕೇಶ್ ಜತೆ ಮನೆಗೆ ಹೊರಗೆ ಪುತ್ರ ನಿಂತಿದ್ದಾಗ ಏಕಾಏಕಿ ಏಳೆಂಟು ಜನ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.
ನನ್ನ ಮಗನ ರಕ್ಷಣೆಗೆ ಹೋದ ಇಮ್ರಾನ್‌ಗೂ ಹಲ್ಲೆ ನಡೆಸಲಾಗಿದೆ. ಆಗ ನಾನು ರಕ್ಷಣೆಗೆ ಜೋರಾಗಿ ಕಿರುಚಿಕೊಂಡೆ. ಈ ಚೀರಾಟ ಕೇಳಿ ಜನ ಜಮಾಯಿಸುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾದರು. ಕಿತಕನೂರಿನಲ್ಲಿರುವ ಭೂಮಿ ವಿಚಾರವಾಗಿ ಜಗದೀಶ್, ಕಿರಣ್, ವಿಮಲ, ಅನಿಲ್ ಹಾಗೂ ಇತರರು ಶಾಸಕ ಬೈರತಿ ಬಸವರಾಜು ಕುಮ್ಮಕ್ಕಿನಿಂದ ನನ್ನ ಮಗನ ಮೇಲೆ ಲಾಂಗ್ ಮಚ್ಚುಗಳಿಂದ ಹಲ್ಲೆ ನಡೆಸಿ ಕೊಂದಿದ್ದಾರೆ. ಇವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತನ ತಾಯಿ ದೂರಿನಲ್ಲಿ ಆಗ್ರಹಿಸಿದ್ದಾರೆ.