ನಶೆಯಲ್ಲಿ ತಾಯಿ ನಿಂದಿಸಿದ ಗೆಳೆಯನ ಹತ್ಯೆ

| Published : Mar 28 2024, 12:45 AM IST / Updated: Mar 28 2024, 01:21 PM IST

ಸಾರಾಂಶ

ಮದ್ಯದ ಅಮಲಿನಲ್ಲಿ ತನ್ನ ತಾಯಿಯನ್ನು ನಿಂದಿಸಿದ ಗೆಳೆಯನನ್ನು ಚಾಕುವಿನಿಂದ ಇರಿದು ಸ್ನೇಹಿತನೇ ಕೊಂದಿರುವ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮದ್ಯದ ಅಮಲಿನಲ್ಲಿ ತನ್ನ ತಾಯಿಯನ್ನು ನಿಂದಿಸಿದ ಗೆಳೆಯನನ್ನು ಚಾಕುವಿನಿಂದ ಇರಿದು ಸ್ನೇಹಿತನೇ ಕೊಂದಿರುವ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಾಗವಾರ ಸಮೀದ ಚೆನ್ನೈ ಲೇಔಟ್‌ ನಿವಾಸಿ ರಾಜ್‌ ಕುಮಾರ್ (35) ಕೊಲೆಯಾದ ದುರ್ದೈವಿ. ಹತ್ಯೆ ಸಂಬಂಧ ಸೂರಜ್ ಸಿಂಗ್ ಹಾಗೂ ಜೈಸಿಂಗ್‌ನನ್ನು ವಶಕ್ಕೆ ಪಡೆಯಲಾಗಿದೆ. 

ಹೋಳಿ ಹಬ್ಬದ ನಿಮಿತ್ತ ಮಂಗಳವಾರ ರಾಜ್‌ಕುಮಾರ್‌ ಕೊಠಡಿಯಲ್ಲಿ ಈ ಮೂವರು ಪಾರ್ಟಿ ಮಾಡಿದ್ದರು. ಆ ವೇಳೆ ಮದ್ಯದ ಮತ್ತಿನಲ್ಲಿ ಗೆಳೆಯರ ಮಧ್ಯೆ ಜಗಳವಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತ ರಾಜ್‌ಕುಮಾರ್, ಜೈಸಿಂಗ್ ಹಾಗೂ ಸೂರಜ್‌ ಮೂಲತಃ ಉತ್ತರಪ್ರದೇಶ ರಾಜ್ಯದವರಾಗಿದ್ದು, ನಗರದಲ್ಲಿ ಈ ಮೂವರು ಪೇಂಟಿಂಗ್‌ ಕೆಲಸ ಮಾಡುತ್ತಿದ್ದರು. 

ನಾಗರವಾರದ ಚೆನ್ನೈ ಲೇಔಟ್‌ನಲ್ಲಿ ಬಾಡಿಗೆ ಕೊಠಡಿಯಲ್ಲಿ ರಾಜ್‌ ಕುಮಾರ್ ಹಾಗೂ ಸೂರಜ್‌ ಒಟ್ಟಿಗೆ ನೆಲೆಸಿದ್ದರು. ಹೋಳಿ ಹಬ್ಬದ ನಿಮಿತ್ತ ಮಂಗಳವಾರ ಕೆಲಸಕ್ಕೆ ರಜೆ ಪಡೆದಿದ್ದ ಸ್ನೇಹಿತರು, ತಮ್ಮ ಕೊಠಡಿಯಲ್ಲೇ ಚಿಕನ್ ಅಡುಗೆ ಮಾಡಿ ಮಧ್ಯಾಹ್ನ ಅಲ್ಲೇ ಮದ್ಯ ಸೇವಿಸಿದ್ದರು. ಆಗ ಕಂಠಮಟ್ಟ ಮದ್ಯ ಸೇವಿಸಿದ ಬಳಿಕ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಜಗಳವಾಗಿದೆ.

ಈ ವೇಳೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಸಿಟ್ಟಿನಲ್ಲಿ ಸೂರಜ್‌ ತಾಯಿಯನ್ನು ರಾಜಕುಮಾರ್ ನಿಂದಿಸಿದ್ದಾನೆ ಎನ್ನಲಾಗಿದೆ. ಇದರಿಂದ ಕೆರಳಿದ ಆತ, ಕೋಣೆಯಲ್ಲಿದ್ದ ದೊಣ್ಣೆಯಿಂದ ರಾಜ್‌ಕುಮಾರ್‌ ತಲೆಗೆ ಹೊಡೆದಿದ್ದಾನೆ. 

ಪೆಟ್ಟು ತಿಂದು ಕೆಳಗೆ ಬಿದ್ದ ಆತನಿಗೆ ಕುತ್ತಿಗೆ ಚಾಕುವಿನಿಂದ ಎರಡು ಬಾರಿ ಇರಿದು ಹತ್ಯೆಗೈದು ಪರಾರಿ ಆಗಿದ್ದಾನೆ. ಈ ಕೃತ್ಯ ನಡೆದಾಗ ಜೈಸಿಂಗ್ ಸಹ ಅದೇ ಕೊಠಡಿಯಲ್ಲಿದ್ದ. 

ಕೆಲ ಹೊತ್ತಿನ ಬಳಿಕ ಅದೇ ಕಟ್ಟಡದಲ್ಲಿ ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದವರು ಮೃತನ ಕೋಣೆ ಮುಂದೆ ಚೆಲ್ಲಾಡಿದ ರಕ್ತ ಕಂಡು ಆತಂಕದಿಂದ ಕೊಠಡಿಗೆ ತೆರಳಿ ನೋಡಿದಾಗ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿದೆ. 

ತಕ್ಷಣವೇ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಕೃತ್ಯದ ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಓಡಿ ಹೋಗಿದ್ದ ಮೃತನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.