ಸಾರಾಂಶ
ಬೆಂಗಳೂರು : ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸೋಲದೇವನಹಳ್ಳಿ ಠಾಣೆ ಪೊಲೀಸರು ಮೃತನ ಅಂಗರಕ್ಷಕ ಸೇರಿ ಕೆಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಈಗಾಗಲೇ ದುಷ್ಕರ್ಮಿಗಳ ಪತ್ತೆಗೆ ಪೊಲೀಸರ ಐದು ತಂಡಗಳನ್ನು ರಚಿಸಲಾಗಿದೆ. ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಿದ್ದು, ದುಷ್ಕರ್ಮಿಗಳ ಸುಳಿವು ಪತ್ತೆಯಾಗಿದೆ. ಈ ಸುಳಿವು ಅಧರಿಸಿ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.
ಕೊಲೆಯಾದ ಲೋಕನಾಥ್ ಸಿಂಗ್ ವ್ಯವಹಾರ ಸಂಬಂಧ ಹೊರಗೆ ಹೋದಾಗ ಜತೆಗೆ ಅಂಗರಕ್ಷಕನನ್ನು ಕರೆದುಕೊಂಡು ಹೋಗುತ್ತಿದ್ದರು. ಆದರೆ, ಶನಿವಾರ ಸಂಜೆ ಹೊರಗೆ ಹೋದಾಗ ಜತೆಯಲ್ಲಿ ಅಂಗರಕ್ಷಕನ್ನು ಕರೆದುಕೊಂಡು ಹೋಗಿರಲಿಲ್ಲ. ಸ್ನೇಹಿತರ ಜತೆಗೆ ಲೋಕನಾಥ್ ಹೊರಗೆ ಹೋಗಿದ್ದರು. ಈ ವೇಳೆ ಲೋಕನಾಥ್ ಕೊಲೆಯಾಗಿದೆ ಎನ್ನಲಾಗಿದೆ.
ಈ ಸಂಬಂಧ ಪೊಲೀಸರು ಅಂಗರಕ್ಷಕನನ್ನು ವಿಚಾರಣೆ ನಡೆಸಿ ಕೆಲ ಮಾಹಿತಿ ಕಲೆ ಹಾಕಿದ್ದಾರೆ. ಲೋಕನಾಥ್ ಯಾರೊಂದಿಗೆ ವ್ಯವಹಾರ ಇರಿಸಿಕೊಂಡಿದ್ದರು. ಇತ್ತೀಚೆಗೆ ಯಾರೊಂದಿಗಾದರೂ ಜಗಳ ಅಥವಾ ಗಲಾಟೆಗಳು ಸೇರಿದಂತೆ ಲೋಕನಾಥ್‌ನ ದಿನಚರಿ, ವ್ಯವಹಾರ, ಖಾಸಗಿ ಬದುಕು ಇತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಲೋಕನಾಥ್ ಶೀಘ್ರದಲ್ಲೇ ಮದುವೆಯಾಗಲು ತಯಾರಿ ನಡೆಸಿದ್ದರು ಎಂಬುದು ತಿಳಿದು ಬಂದಿದೆ.
ಮಾಗಡಿ ತಾಲೂಕಿನ ಕುದೂರು ನಿವಾಸಿ ಲೋಕನಾಥ್ ಸಿಂಗ್ ಅವರನ್ನು ದುಷ್ಕರ್ಮಿಗಳು ಶನಿವಾರ ಸಂಜೆ ಬಿಜಿಎಸ್ ಲೇಔಟ್‌ನಲ್ಲಿನ ನಿರ್ಮಾಣ ಹಂತದ ಕಟ್ಟಡದ ಬಳಿ ಕಾರಿನಲ್ಲೇ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))