ಪಾಳು ಮನೆಯಲ್ಲಿ ಸಿಕ್ಕಿಬಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರ : ಹಲ್ಲೆ ಮಾಡಿ ಪ್ರಿಯಕರ ಹತ್ಯೆ

| N/A | Published : Feb 21 2025, 01:46 AM IST / Updated: Feb 21 2025, 04:24 AM IST

ಸಾರಾಂಶ

ಪಾಳು ಮನೆಯಲ್ಲಿ ಸಿಕ್ಕಿಬಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನ ಮೇಲೆ ಪತಿ, ಪುತ್ರಿ, ಅಳಿಯ ಸೇರಿಕೊಂಡು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ಪ್ರಿಯಕರ ಮೃತಪಟ್ಟು, ಪತ್ನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಡುಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಪಾಳು ಮನೆಯಲ್ಲಿ ಸಿಕ್ಕಿಬಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನ ಮೇಲೆ ಪತಿ, ಪುತ್ರಿ, ಅಳಿಯ ಸೇರಿಕೊಂಡು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ಪ್ರಿಯಕರ ಮೃತಪಟ್ಟು, ಪತ್ನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಡುಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚನ್ನಸಂದ್ರ ನಿವಾಸಿ ಕಿಶೋರ್‌ ಕುಮಾರ್‌ (38) ಕೊಲೆಯಾದವ. ಈತನ ಪ್ರೇಯಸಿ ಅರುಂಧತಿ(37) ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಮಧ್ಯಾಹ್ನ ಸುಮಾರು 1.30ಕ್ಕೆ ಕಾಡುಗೋಡಿ ಸಮೀಪದ ಬೆಳತ್ತೂರು ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಗಾಯಾಳು ಅರುಂಧತಿ ಪತಿ ಯಲ್ಲಪ್ಪ(45), ಪುತ್ರಿ ಪೂಜಾ(20) ಮತ್ತು ಅಳಿಯ ವೆಂಕಟರಾಮು(24)ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಕೋಲಾರ ಜಿಲ್ಲೆ ಶ್ರೀನಿವಾಸಪುರ ಮೂಲದ ಯಲ್ಲಪ್ಪ-ಅರುಂಧತಿ ದಂಪತಿ ತಮ್ಮ ಪುತ್ರಿ ಪೂಜಾ ಜತೆಗೆ ಸ್ವಂತ ಊರಿನಲ್ಲಿ ನೆಲೆಸಿದ್ದರು. ಒಂದು ವರ್ಷದ ಹಿಂದೆ ಪುತ್ರಿ ಪೂಜಾಳನ್ನು ಅರುಂಧತಿ ಸಹೋದರ ವೆಂಕಟರಾಮುಗೆ ಕೊಟ್ಟು ಮದುವೆ ಮಾಡಿಸಿದ್ದರು. ವೆಂಕಟರಾಮು ದಂಪತಿ ಕಾಡುಗೋಡಿ ಸಮೀಪದ ಬೆಳತ್ತೂರಿನಲ್ಲಿ ನೆಲೆಸಿದ್ದರು. ಈ ನಡುವೆ ಕೆಲ ವರ್ಷಗಳ ಹಿಂದೆ ಹಿಂದೆ ಪರಿಚಿತನಾಗಿದ್ದ ದೂರದ ಸಂಬಂಧಿ ಕಿಶೋರ್‌ ಕುಮಾರ್‌ ಜತೆಗೆ ಅರುಂಧತಿ ಅನೈತಿಕ ಸಂಬಂಧ ಇರಿಸಿಕೊಂಡಿದ್ದಳು. ಈ ವಿಚಾರ ಪತಿ ಯಲ್ಲಪ್ಪಗೆ ತಿಳಿದು ಬುದ್ಧಿವಾದ ಹೇಳಿದರೂ ಆಕೆ ಅನೈತಿಕ ಸಂಬಂಧ ಮುಂದುವರೆಸಿದ್ದಳು. ಈ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ಗಲಾಟೆಗಳು ಆಗಿದ್ದವು. ಕಳೆದ ಆರು ತಿಂಗಳಿಂದ ಅರುಂಧತಿ ಪತಿಯನ್ನು ತೊರೆದು ಪುತ್ರಿ ಪೂಜಾ ಜತೆಗೆ ಬೆಳತ್ತೂರಿನಲ್ಲಿ ನೆಲೆಸಿದ್ದಳು.

ಪಾಳು ಮನೆಯಲ್ಲಿ ಭೇಟಿ

ಪತಿ ಜತೆ ಜಗಳ ಮಾಡಿಕೊಂಡು ಪುತ್ರಿ ಮನೆಯಲ್ಲಿ ನೆಲೆಸಿದ್ದ ಅರುಂಧತಿ ನಂತರವೂ ಕಿಶೋರ್‌ ಕುಮಾರ್‌ ಜತೆಗೆ ತನ್ನ ಅನೈತಿಕ ಸಂಬಂಧ ಮುಂದುವರೆಸಿದ್ದಳು. ಬೆಳತ್ತೂರು ಕಾಲೋನಿಯ ಪಾಳು ಮನೆಯಲ್ಲಿ ಆಗಾಗ ಇಬ್ಬರು ಭೇಟಿಯಾಗುತ್ತಿದ್ದರು. ಗುರುವಾರ ಮಧ್ಯಾಹ್ನ ಸಹ ಅರುಂಧತಿ ಮತ್ತೆ ಕಿಶೋರ್‌ ಕುಮಾರ್‌ ಆ ಪಾಳು ಮನೆಯಲ್ಲಿ ಭೇಟಿಯಾಗಿದ್ದರು. ಇದೇ ಸಮಯಕ್ಕೆ ಯಲ್ಲಪ್ಪ ಆ ಪಾಳು ಮನೆ ಕಡೆಗೆ ಬಂದಾಗ ಪತ್ನಿ ಅರುಂಧತಿ ಮತ್ತು ಆಕೆಯ ಪ್ರಿಯಕರ ಕಿಶೋರ್‌ ಕುಮಾರ್‌ ಒಟ್ಟಿಗೆ ಸಿಕ್ಕಿಬಿದ್ದಿದ್ದಾರೆ.

ಇದರಿಂದ ಕೋಪಗೊಂಡ ಯಲ್ಲಪ್ಪ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ. ಅಳಿಯ ಮತ್ತು ಪುತ್ರಿಗೆ ಕರೆ ಮಾಡಿ ಪಾಳು ಮನೆ ಬಳಿ ಕರೆಸಿಕೊಂಡಿದ್ದಾನೆ. ಬಳಿಕ ಮೂವರು ಸೇರಿಕೊಂಡು ಮಾರಕಾಸ್ತ್ರಗಳಿಂದ ಅರುಂಧತಿ ಮತ್ತು ಆಕೆಯ ಪ್ರಿಯಕರ ಕಿಶೋರ್‌ ಕುಮಾರ್‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಚಿಕಿತ್ಸೆ ಫಲಿಸದೆ ಕಿಶೋರ್‌ ಸಾವು:

ಚೀರಾಟದ ಸದ್ದಿಗೆ ಸ್ಥಳೀಯರು ಪಾಳು ಮನೆ ಬಳಿ ಜಮಾಯಿಸಿದ್ದಾರೆ. ಈ ವೇಳೆ ರಕ್ತದಮಡುವಿನಲ್ಲಿ ಬಿದ್ದಿದ್ದ ಕಿಶೋರ್‌ ಕುಮಾರ್‌ ಮತ್ತು ಅರುಂಧತಿಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕಿಶೋರ್‌ ಕುಮಾರ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಅರುಂಧತಿಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.