ಸಾರಾಂಶ
ಬೆಂಗಳೂರು : ಇತ್ತೀಚೆಗೆ ನಿರ್ಮಾಣ ಹಂತದ ಕಟ್ಟಡದಲ್ಲಿ ಮಲಗುವ ಜಾಗದ ವಿಚಾರಕ್ಕೆ ನಡೆದ ಜಗಳದ ವೇಳೆ ಕಾರ್ಮಿಕನ ತಲೆ ಮೇಲೆ ಹಾಲೋ ಬ್ರಿಕ್ಸ್ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಪರಾರಿಯಾಗಿದ್ದ ಆರೋಪಿಯನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಿರಿನಗರದ ಈರಣ್ಣನಗುಡ್ಡೆ ಕಸ್ತೂರಿ ಬಾ ಕಾಲೋನಿ ನಿವಾಸಿ ಹರೀಶ್ ಅಲಿಯಾಸ್ ಅಮಾವಾಸೆ(38) ಬಂಧಿತ. ಆರೋಪಿಯು ಸೆ.24ರಂದು ಮಧ್ಯಾಹ್ನ ಶ್ರೀನಗರದ 11ನೇ ಮುಖ್ಯರಸ್ತೆಯ ನಿರ್ಮಾಣ ಹಂತದ ಕಟ್ಟಡದ ಮೂರನೇ ಮಹಡಿಯಲ್ಲಿ ಅಜಿತ್(27) ಎಂಬ ಕಾರ್ಮಿಕನ ತಲೆ ಮೇಲೆ ಹಾಲೋ ಬ್ರಿಕ್ಸ್ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆಗೈದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ತಮಿಳುನಾಡು ಮೂಲದ ಅಜಿತ್ ಕಳೆದ ಆರು ತಿಂಗಳಿಂದ ನಗರದ ಮುನೇಶ್ವರ ಬ್ಲಾಕ್‌ನಲ್ಲಿ ಚಿಕ್ಕ ಮನೆಯಲ್ಲಿ ನೆಲೆಸಿದ್ದ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕಾರ್ಮಿಕನಾಗಿದ್ದ. ಎಷ್ಟೋ ಬಾರಿ ಕೆಲಸ ಮಾಡುವ ಸ್ಥಳಗಳಲ್ಲೇ ರಾತ್ರಿ ಮಲಗುತ್ತಿದ್ದ. ತುಮಕೂರಿನ ಕೊರಟಗೆರೆ ಮೂಲದ ಆರೋಪಿ ಹರೀಶ್, ಗಿರಿನಗರದ ಈರಣ್ಣನಗುಡ್ಡೆ ಕಸ್ತೂರಿ ಬಾ ಕಾಲೋನಿಯಲ್ಲಿ ನೆಲೆಸಿದ್ದ. ಈತ ಕೂಡ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೆಲಸಕ್ಕಿದ್ದ. ರಾತ್ರಿ ವೇಳೆ ಕೆಲಸ ಮಾಡುವ ಸ್ಥಳದಲ್ಲೇ ಮಲಗುತ್ತಿದ್ದ.
ಸೆ.24ರಂದು ಶ್ರೀನಗರದ ಡಾ। ನರೇಂದ್ರ ಕುಮಾರ್ ಎಂಬುವವರ ನಿರ್ಮಾಣ ಹಂತದ ಕಟ್ಟಡದಲ್ಲಿ ಅಜಿತ್ ಮತ್ತು ಹರೀಶ್ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಇಬ್ಬರು ಮಧ್ಯಾಹ್ನ ಮದ್ಯ ಸೇವಿಸಿದ್ದಾರೆ. ಈ ವೇಳೆ ಅಜಿತ್ ಕಟ್ಟಡದ ಮೊದಲ ಮಹಡಿಯಲ್ಲಿ ಕುಳಿತು ಊಟ ಮಾಡುವಾಗ, ಅಲ್ಲಿಗೆ ಬಂದಿರುವ ಹರೀಶ್, ಇಲ್ಲಿ ನಾನು ಕುಳಿತು ಕೊಳ್ಳಬೇಕು ಎಂದಿದ್ದಾನೆ. ಈ ವೇಳೆ ಅಜಿತ್ ಮೇಲೆ ಎದ್ದು ಮೂರನೇ ಮಹಡಿಗೆ ತೆರಳಿ ಊಟಕ್ಕೆ ಕುಳಿತ್ತಿದ್ದಾನೆ.
ಮಲಗುವ ಜಾಗದ ವಿಚಾರಕ್ಕೆ ಕೊಲೆ:
ಅಲ್ಲಿಗೂ ಬಂದಿರುವ ಹರೀಶ್, ಇಲ್ಲಿ ನಾನು ಮಲಗಬೇಕು. ಈ ಜಾಗದಿಂದ ಮೇಲೇಳು ಎಂದಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ಕೋಪಗೊಂಡ ಹರೀಶ್, ಅಲ್ಲೇ ಬಿದ್ದಿದ್ದ ಹಾಲೋ ಬ್ರಿಕ್ಸ್ ಸಿಮೆಂಟ್ ಇಟ್ಟಿಗೆ ತೆಗೆದು ಅಜಿತ್ ತಲೆ ಮೇಲೆ ಎತ್ತಿಹಾಕಿ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವವಾಗಿ ಅಜಿತ್ ಸ್ಥಳದಲ್ಲೇ ಮೃತಪಟ್ಟಿದ್ದ. ದಾಖಲಾದ ದೂರಿನ ಮೇರೆಗೆ ಹನುಮಂತನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಈ ಹಿಂದೆಯೂ ಕೊಲೆ ಕೇಸ್‌ನಲ್ಲಿ ಜೈಲಿಗೆ
ಆರೋಪಿ ಹರೀಶ್ ಅಪರಾಧ ಹಿನ್ನೆವುಳ್ಳವನಾಗಿದ್ದಾನೆ. 2014ರಲ್ಲಿ ಕೊರಟಗೆರೆಯಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಸೆಷನ್ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದೆ. ಬಳಿಕ ಆರೋಪಿಯು ಹೈಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಇದಕ್ಕೂ ಮುನ್ನ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 200-2011ರ ಅವಧಿಯಲ್ಲಿ ಮೂರು ಕೊಲೆಗೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.