ತಾವು ಕೆಲಸ ಮಾಡುತ್ತಿದ್ದ ಗುತ್ತಿಗೆದಾರರ ಮನೆಯಲ್ಲಿ ₹25 ಲಕ್ಷ ಹಣ ದೋಚಿದ್ದ ನೇಪಾಳಿ ದಂಪತಿಯನ್ನು ಕೃತ್ಯ ನಡೆದ ಕೆಲವೇ ತಾಸುಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತಾವು ಕೆಲಸ ಮಾಡುತ್ತಿದ್ದ ಗುತ್ತಿಗೆದಾರರ ಮನೆಯಲ್ಲಿ ₹25 ಲಕ್ಷ ಹಣ ದೋಚಿದ್ದ ನೇಪಾಳಿ ದಂಪತಿಯನ್ನು ಕೃತ್ಯ ನಡೆದ ಕೆಲವೇ ತಾಸುಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ನೇಪಾಳ ದೇಶದ ಪವನ್ ಬಿಸ್ತಾ ಅಲಿಯಾಸ್ ಭುವನ್ ಬಿಸ್ತಾ ಹಾಗೂ ಆತನ ಪತ್ನಿ ಸೀತಾ ಬಿಸ್ತಾ ಬಂಧಿತರಾಗಿದ್ದು, ಆರೋಪಿಗಳಿಂದ ಕಳವು ಮಾಡಲಾಗಿದ್ದ 25 ಲಕ್ಷ ರು. ಹಣವನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಅರ್ಕಾವತಿ ಲೇಔಟ್‌ನಲ್ಲಿ ನೆಲೆಸಿರುವ ಗುತ್ತಿಗೆದಾರ ಸುಬ್ಬಾರೆಡ್ಡಿ ಅವರ ಮನೆಯಲ್ಲಿ ಕೆಲಸಗಾರರಿಂದ ಹಣ ಕಳ್ಳತನವಾಗಿತ್ತು. ಈ ಕೃತ್ಯ ನಡೆದ 24 ತಾಸಿನಲ್ಲೇ ಆರೋಪಿಗಳನ್ನು ಇನ್ಸ್‌ಪೆಕ್ಟರ್ ಬಾಲಾಜಿ ಸಾರಥ್ಯದಲ್ಲಿ ಸಬ್ ಇನ್ಸ್‌ಪೆಕ್ಟರ್ ಕೆ.ಎಲ್.ಪ್ರಭು ತಂಡ ಬಂಧಿಸಿದೆ.
ಅಕಾರ್ವತಿ ಲೇಔಟ್‌ನಲ್ಲಿ ತಮ್ಮ ಕುಟುಂಬದ ಜತೆ ಗುತ್ತಿಗೆದಾರ ಸುಬ್ಬಾರೆಡ್ಡಿ ನೆಲೆಸಿದ್ದು, ಕಳೆದೊಂದು ತಿಂಗಳಿಂದ ಅವರ ಮನೆಯಲ್ಲಿ ಬಿಸ್ತಾ ದಂಪತಿ ಕೆಲಸ ಮಾಡುತ್ತಿದ್ದರು. ಆ ಮನೆಯ ಆವರಣದಲ್ಲಿ ನೇಪಾಳದ ದಂಪತಿಗೆ ವಾಸ್ತವ್ಯಕ್ಕೆ ರೂಮ್ ಕೊಟ್ಟಿದ್ದರು. ಮೇ.27 ರಂದು 25 ಲಕ್ಷ ರು.ಗಳನ್ನು ಬ್ಯಾಂಕ್‌ನಿಂದ ತಂದು ವಾಡ್‌ರೂಬ್‌ನಲ್ಲಿ ಸುಬ್ಬಾರೆಡ್ಡಿ ಇಟ್ಟಿದ್ದರು. ಬಳಿಕ ಕೆಲಸದ ನಿಮಿತ್ತ ಮನೆಯಿಂದ ಹೊರ ಹೋದವರು ಸಂಜೆ 4 ಗಂಟೆಗೆ ಅವರು ಮರಳಿದ್ದಾರೆ.ಆಗ ಕೆಲಸಗಾರ ಪವನ್ ದಂಪತಿ ಮನೆಯಲ್ಲಿ ಕಾಣದೆ ಹೋದಾಗ ಆತನಿಗೆ ರೆಡ್ಡಿ ಕರೆ ಮಾಡಿದ್ದಾರೆ. ಆ ವೇಳೆ ಆತನ ಮೊಬೈಲ್ ಸ್ವಿಚ್ಢ್ ಆಫ್ ಆಗಿತ್ತು. ಇದರಿಂದ ಶಂಕೆಗೊಂಡ ಅವರು ಕೂಡಲೇ ತಮ್ಮ ಕೋಣೆಗೆ ತೆರಳಿ ಬೆಳಗ್ಗೆ ತಂದಿಟ್ಟ ಹಣವನ್ನು ಪರಿಶೀಲಿಸಿದಾಗ ಶಾಕ್ ಆಗಿದೆ. ವಾಡ್ ರೂಬ್‌ನಲ್ಲಿ ಹಣ ಕಾಣದೆ ಹೋದಾಗ ಕೆಲಸಗಾರರ ಮೇಲೆ ರೆಡ್ಡಿ ಅನುಮಾನ ಬಂದಿದೆ. ತಕ್ಷಣವೇ ಅಮೃತಹಳ್ಳಿ ಠಾಣೆ ಪೊಲೀಸರಿಗೆ ಗುತ್ತಿಗೆದಾರರು ದೂರು ನೀಡಿದ್ದಾರೆ. ತಡ ಮಾಡದೆ ಆರೋಪಿಗಳ ಬೆನ್ನ ಹತ್ತಿದ ಪೊಲೀಸರು, ನಗರ ತೊರೆಯಲು ಸಜ್ಜಾಗಿದ್ದ ದಂಪತಿಯನ್ನು ಕೆಂಗೇರಿ ಸಮೀಪ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೋಜು ಜೀವನಕ್ಕೆ ಕಳ್ಳತನಮೋಜಿನ ಜೀವನ ನಡೆಸಲು ಹಣ ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗುತ್ತಿಗೆದಾರರ ಮನೆಯಲ್ಲಿ ಕೆಲಸ ಮಾಡುವಾಗ ಅವರ ಆರ್ಥಿಕ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಕಳ್ಳತನಕ್ಕೆ ದಂಪತಿ ನಿರ್ಧರಿಸಿದ್ದರು ಎಂದು ಮೂಲಗಳು ಹೇಳಿವೆ.
ಹೊಸ ಮೊಬೈಲ್ ನಂಬರ್ ಸುಳಿವುಹಣ ಕಳ್ಳತನ ಬಳಿಕ ತಮ್ಮ ಮೊಬೈಲ್ ಅನ್ನು ನೇಪಾಳ ದಂಪತಿ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರು. ಬಳಿಕ ಕೆಂಗೇರಿಯಲ್ಲಿದ್ದ ತಮ್ಮ ಸಂಬಂಧಿಕರನ್ನು ಭೇಟಿಯಾದ ಅವರು, ಅಲ್ಲಿ ಹೊಸ ಸಿಮ್ ಖರೀದಿಸಿದ್ದರು. ಕೆಂಗೇರಿಯಲ್ಲಿ ಆರೋಪಿಗಳ ಬಂಧುಗಳಿರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು, ಕೊನೆಗೆ ಬಂಧುಗಳನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಹೊಸ ಮೊಬೈಲ್ ನಂಬರ್ ಸಿಕ್ಕಿದೆ. ಈ ಸುಳಿವು ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.