ಸಾರಾಂಶ
ಬೆಂಗಳೂರು : ಲಾಲ್‌ಬಾಗ್‌ನಲ್ಲಿ ಹೋಳಿ ಸಂಭ್ರಮಾಚರಣೆ ಮಾಡುವಾಗ ನಡೆದ ಜಗಳದ ವೇಳೆ ನೇಪಾಳ ಮೂಲದ ಯುವಕರು ಸ್ಥಳೀಯ ಸೋಡಾ ವ್ಯಾಪಾರಿ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಹೊಡೆದಾಟದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನೇಪಾಳಿ ಯುವಕರ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ಸಿದ್ಧಾಪುರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ನೇಪಾಳ ಮೂಲದ ರಮೇಶ್ (28), ರಾಜೇಶ್ (30) ಹಾಗೂ ಉಮೇಶ್ (28) ಬಂಧಿತರು. ತಲೆಮರೆಸಿಕೊಂಡಿರುವ 10ಕ್ಕೂ ಅಧಿಕ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಆರೋಪಿಗಳು ಮಾ.14ರಂದು ಲಾಲ್‌ಬಾಗ್‌ನಲ್ಲಿ ಹೋಳಿ ಸಂಭ್ರಮಾಚರಣೆ ವೇಳೆ ಸೋಡಾ ವ್ಯಾಪಾರಿ ಅಮರ್(28)ಗೆ ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿದ್ದರು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿಗಳು ನೇಪಾಳದಿಂದ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಸ್ಥಳೀಯ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ:
ಮಾ.14ರಂದು ನೇಪಾಳ ಮೂಲದ ಸುಮಾರು 20ಕ್ಕೂ ಅಧಿಕ ಯುವಕರ ಗುಂಪು ಲಾಲ್‌ಬಾಗ್ ಗೇಟ್ ಎದುರು ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದ್ದಾರೆ. ಸಂಜೆ ಸುಮಾರು 4.30ಕ್ಕೆ ಲಾಲ್‌ಬಾಗ್ ಒಳಗೆ ತೆರಳಿರುವ ಯುವಕರು ಹಾಸು ಕಲ್ಲಿನ ಬಳಿ ಮತ್ತೆ ಪರಸ್ಪರ ಬಣ್ಣ ಎರಚಿಕೊಂಡು ಕೂಗಾಡಿದ್ದಾರೆ. ಈ ವೇಳೆ ಅವರಲ್ಲೇ ಕೆಲವರ ಮಧ್ಯೆ ಮಾತಿಗೆ ಮಾತು ಬೆಳೆದು ಪರಸ್ಪರ ದೊಣ್ಣೆಗಳಿಂದ ಹೊಡೆದಾಡಿದ್ದಾರೆ.
ವ್ಯಾಪಾರಿ ಮೇಲೆ ಹಲ್ಲೆ:
ಈ ವೇಳೆ ಹಾಸು ಬಂಡೆ ಮೇಲೆ ಟೇಬಲ್ ಹಾಕಿ ಸೋಡಾ ಮಾರಾಟ ಮಾಡುತ್ತಿದ್ದ ಅಮರ್ ಮೇಲೆ ಯುವಕರ ಗುಂಪೊಂದು ಬಿದ್ದ ಪರಿಣಾಮ ಸೋಡಾ ಬಾಟಲ್‌ಗಳು ಒಡೆದಿವೆ. ಇದರಿಂದ ಕೋಪಗೊಂಡ ಅಮರ್, ಆ ಯುವಕರನ್ನು ಪ್ರಶ್ನಿಸಿದ್ದಾನೆ. ಅಷ್ಟಕ್ಕೆ ಕೋಪಗೊಂಡ ಯುವಕರು ಏಕಾಏಕಿ ಕೈಗೆ ಸಿಕ್ಕ ದೊಣ್ಣೆಗಳಿಂದ ಅಮರ್ ಮೇಲೆ ಹಲ್ಲೆ ಮಾಡಿದ್ದಾರೆ. ಹೆಲ್ಮೆಟ್‌ನಿಂದ ತಲೆಗೆ ಹೊಡೆದಿದ್ದಾರೆ. ಈ ವೇಳೆ ತಲೆಗೆ ಗಂಭೀರ ಗಾಯವಾಗಿ ಅಮರ್ ಕುಸಿದು ಬಿದ್ದಿದ್ದಾನೆ. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ನೇಪಾಳಿ ಯುವಕರ ಗುಂಪನ್ನು ಚದುರಿಸಿದ್ದಾರೆ.
ಮದ್ಯ, ಡ್ರಗ್ಸ್ ನಶೆಯಲ್ಲಿ ಗಲಾಟೆ?:
ನೇಪಾಳಿ ಯುವಕರು ಹೋಳಿ ಆಚರಣೆ ವೇಳೆ ಮದ್ಯ ಹಾಗೂ ಡ್ರಗ್ಸ್ ನಶೆಯಲ್ಲಿದ್ದರು ಎನ್ನಲಾಗಿದೆ. ಲಾಲ್‌ಬಾಗ್ ದ್ವಾರದಲ್ಲೇ ಭದ್ರತಾ ಸಿಬ್ಬಂದಿ ಬಣ್ಣ ತೆಗೆದುಕೊಂಡು ಹೋಗದಂತೆ ಯುವಕರನ್ನು ತಡೆದಿದ್ದಾರೆ. ಆದರೆ, ಜೇಬು, ಬಟ್ಟೆಯೊಳಗೆ ಬಣ್ಣದ ಪೊಟ್ಟಣ ಮರೆಮಾಚಿಕೊಂಡು ಯುವಕರು ಲಾಲ್‌ಬಾಗ್ ಪ್ರವೇಶಿಸಿದ್ದಾರೆ. ಮದ್ಯ ಮತ್ತು ಮಾದಕ ವಸ್ತು ಸೇವನೆ ನಶೆಯಲ್ಲಿ ಪರಸ್ಪರ ಬಣ್ಣ ಎರೆಚ್ಚಿಕೊಂಡು ಸಂಭ್ರಮಿಸುವಾಗ ಅವರವರೇ ಹೊಡೆದಾಡಿದ್ದಾರೆ. ಬಳಿಕ ಸೋಡಾ ವ್ಯಾಪಾರಿ ಅಮರ್ ಮೇಲೆ ಮುಗಿಬಿದ್ದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಪೊಲೀಸರ ವಿರುದ್ಧ ಸ್ಥಳೀಯರ ಆಕ್ರೋಶ:
ಲಾಲ್‌ಬಾಗ್‌ನಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆದರೂ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಸಿದ್ಧಾಪುರ ಪೊಲೀಸ್ ಠಾಣೆ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿದರು. ಸ್ಥಳೀಯ ವ್ಯಾಪಾರಿ ಅಮರ್ ಮೇಲೆ ನೇಪಾಳಿ ಯುವಕರ ಗುಂಪು ಮಾರಣಾಂತಿಕ ಹಲ್ಲೆ ಮಾಡಿದ್ದರೂ ಪೊಲೀಸರು ಅಂದು ಯಾವುದೇ ಕ್ರಮ ಜರುಗಿಸಿಲ್ಲ. ಹಲ್ಲೆ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಸುಮೋಟೋ ಕೇಸ್ ದಾಖಲಿಸಿದ್ದಾರೆ. ಲಾಲ್‌ಬಾಗ್‌ಗೆ ಸೂಕ್ತ ಭದ್ರತೆ ಇಲ್ಲ ಎಂದು ಸ್ಥಳೀಯ ನಿವಾಸಿಗಳು ಕಿಡಿಕಾರಿದರು.
ಲಾಲ್‌ಬಾಗ್ ಬಟಾನಿಕಲ್ ಗಾರ್ಡನ್‌ನಲ್ಲಿ ಮಾ.14ರಂದು ನಡೆದಿರುವ ಗುಂಪು ಘರ್ಷಣೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಲಾಲ್‌ಬಾಗ್‌ಗೆ ನೇಪಾಳ ಮೂಲದ ಕುಟುಂಬಗಳು ಬಂದಿದ್ದಾಗ ಅವರ ನಡುವೇ ಜಗಳವಾಗಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ.
-ಲೊಕೇಶ್ ಭರಮಪ್ಪ ಜಗಲಾಸರ್, ದಕ್ಷಿಣ ವಿಭಾಗದ ಡಿಸಿಪಿ