ಸಾರಾಂಶ
ಬೆಂಗಳೂರು : ಜೆ.ಪಿ.ನಗರದಲ್ಲಿ ನಡೆದಿದ್ದ ಕುಕ್ಕರ್ ಸ್ಫೋಟ ಅವಘಡದ ಗಾಯಾಳುಗಳ ಪೈಕಿ ಓರ್ವ ಚಿಕಿತ್ಸೆ ಫಲಿಸದೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾನೆ. ಈ ನಡುವೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಕೇಂದ್ರ ಗುಪ್ತದಳದ (ಐಬಿ) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉತ್ತರಪ್ರದೇಶ ಮೂಲದ ಮೋಸಿನ್ ಅಹಮ್ಮದ್ (28) ಮೃತ ದುರ್ದೈವಿ. ಮನೆಯಲ್ಲಿ ಅಡುಗೆ ತಯಾರಿಸುವ ವೇಳೆ ಮಂಗಳವಾರ ಆಕಸ್ಮಿಕವಾಗಿ ಕುಕ್ಕರ್ ಸ್ಫೋಟಗೊಂಡು ಮೋಸಿನ್ ಹಾಗೂ ಆತನ ಸ್ನೇಹಿತ ಸಮೀರ್ ಗಾಯಗೊಂಡಿದ್ದರು. ಈ ಘಟನೆಯಲ್ಲಿ ಭಾಗಶಃ ಸುಟ್ಟು ಗಾಯಗೊಂಡಿದ್ದ ಮೋಸಿನ್ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಂಟು ವರ್ಷಗಳಿಂದ ಜೆ.ಪಿ.ನಗರದ ಸಲೂನ್‌ನಲ್ಲಿ ಮೋಸಿನ್ ಕೆಲಸ ಮಾಡುತ್ತಿದ್ದು, ತನ್ನ ಗೆಳೆಯ ಸಮೀರ್ ಜತೆ ಕೋಣೆ ಬಾಡಿಗೆ ಪಡೆದು ಆತ ವಾಸವಾಗಿದ್ದ. ಸಲೂನ್‌ಗೆ ಮಂಗಳವಾರ ರಜೆ ಹಿನ್ನೆಲೆಯಲ್ಲಿ ರೂಮ್‌ನಲ್ಲೇ ಇಬ್ಬರು ಅಡುಗೆ ಮಾಡಿಕೊಳ್ಳಲು ಮುಂದಾಗಿದ್ದರು. ಆಗ ಆಕಸ್ಮಿಕವಾಗಿ ಕುಕ್ಕರ್ ಸಿಡಿದು ಇಬ್ಬರು ಗಾಯಗೊಂಡಿದ್ದರು. ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಗಾಯಾಳುಗಳನ್ನು ಸ್ಥಳೀಯರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೋಸಿನ್ ಕೊನೆಯುಸಿರೆಳೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಐಎ ಭೇಟಿ ಪರಿಶೀಲನೆ
ಜೆ.ಪಿ.ನಗರದ ಕುಕ್ಕರ್ ಸ್ಫೋಟ ಘಟನಾ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಕೇಂದ್ರ ಗುಪ್ತದಳದ (ಐಬಿ) ಅಧಿಕಾರಿಗಳು ಭೇಟಿ ನೀಡಿ ಬುಧವಾರ ಪರಿಶೀಲಿಸಿದರು.
ಬಾಂಬ್ ಸ್ಫೋಟದ ಬಗ್ಗೆ ಶಂಕೆ ಮೂಡಿದ್ದರಿಂದ ಎನ್‌ಐಎ ಹಾಗೂ ಐಬಿ ಅಧಿಕಾರಿಗಳು ತಪಾಸಣೆ ನಡೆಸಿದರು. ಆದರೆ ಸ್ಥಳದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಇದುವರೆಗೆ ಘಟನೆ ಹಿಂದೆ ಯಾವುದೇ ದುರುದ್ದೇಶ ಅಥವಾ ಪಿತೂರಿ ಕಂಡು ಬಂದಿಲ್ಲ. ಅಡುಗೆ ತಯಾರಿಸುವ ವೇಳೆ ಆಕಸ್ಮಿಕವಾಗಿ ಕುಕ್ಕರ್ ಸಿಡಿದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.