ಮನೆಗೆ ಕನ್ನ ಹಾಕಿ ಚಿನ್ನ ದೋಚಿದ್ದ ಕುಖ್ಯಾತ ಸುಪಾರಿ ಕಿಲ್ಲರ್‌ ಬಂಧನ

| Published : Dec 04 2024, 01:30 AM IST

ಮನೆಗೆ ಕನ್ನ ಹಾಕಿ ಚಿನ್ನ ದೋಚಿದ್ದ ಕುಖ್ಯಾತ ಸುಪಾರಿ ಕಿಲ್ಲರ್‌ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿಯಲ್ಲಿ ಮನೆಗಳ್ಳತನ ಕೃತ್ಯಗಳಲ್ಲಿ ತೊಡಗಿದ್ದ ಉತ್ತರ ಪ್ರದೇಶದ ಕುಖ್ಯಾತ ಸುಪಾರಿ ಕ್ಲಿಲರ್‌ವೊಬ್ಬನನ್ನು ಬಂಧಿಸಿ ₹1.36 ಕೋಟಿ ಮೌಲ್ಯದ ವಸ್ತುಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯಲ್ಲಿ ಮನೆಗಳ್ಳತನ ಕೃತ್ಯಗಳಲ್ಲಿ ತೊಡಗಿದ್ದ ಉತ್ತರ ಪ್ರದೇಶದ ಕುಖ್ಯಾತ ಸುಪಾರಿ ಕ್ಲಿಲರ್‌ವೊಬ್ಬನನ್ನು ಬಂಧಿಸಿ ₹ 1.36 ಕೋಟಿ ಮೌಲ್ಯದ ವಸ್ತುಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದ ಉರ್ಮಿ ಮೂಲದ ಇರ್ಫಾನ್‌ ಇಸ್ಲಾಮುದ್ದೀನ್ ಬಂಧಿತನಾಗಿದ್ದು, ಆರೋಪಿಯಿಂದ ₹1.36 ಕೋಟಿ ಮೌಲ್ಯದ 1.7 ಕೆಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ತನ್ನ ಸಹಚರರ ಜತೆ ನಗರಕ್ಕೆ ಬಂದಿದ್ದ ಇರ್ಫಾನ್‌, ಆರೋಗ್ಯ ಬಡಾವಣೆಯಲ್ಲಿ ಮನೆಯೊಂದರ ಬೀಗ ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಕೃತ್ಯದ ತನಿಖೆಗಿಳಿದ ಇನ್ಸ್‌ಪೆಕ್ಟರ್‌ ಎ.ವಿ.ಕುಮಾರ್, ಉತ್ತರಪ್ರದೇಶಕ್ಕೆ ತೆರಳಿ ಕಾರ್ಯಾಚರಣೆಗಿಳಿಯಿತು. ಅಷ್ಟರಲ್ಲಿ ಅಪರಾಧ ಪ್ರಕರಣದಲ್ಲಿ ಆತನನ್ನು ಬಂಧಿಸಿ ಸ್ಥಳೀಯ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಉತ್ತರಪ್ರದೇಶದ ಮುರಾದಾಬಾದ್‌ನ ಜಿಲ್ಲಾ ಕಾರಾಗೃಹದಿಂದ ಬಾಡಿ ವಾರೆಂಟ್ ಮುಖೇನ ವಶಕ್ಕೆ ಪಡೆದು ಇರ್ಫಾನ್‌ನನ್ನು ವಿಚಾರಣೆಗೊಳಪಡಿಸಿದಾಗ ಮನೆಗಳ್ಳತನ ಪ್ರಕರಣದಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಇರ್ಫಾನ್ ನಟೋರಿಯಸ್ ಕ್ರಿಮಿನಲ್ ಆಗಿದ್ದು, ಆತನ ಮೇಲೆ ಉತ್ತರಪ್ರದೇಶದಲ್ಲಿ 3 ಕೊಲೆ ಪ್ರಕರಣಗಳು ಸೇರಿ ವಿವಿಧ ಪ್ರಕರಣಗಳು ದಾಖಲಾಗಿವೆ. ಸುಪಾರಿ ಕೊಲೆಗೆ ಆತ ಕುಖ್ಯಾತನಾಗಿದ್ದ. ಆದರೆ ಕೊಲೆ ಕೃತ್ಯಗಳಲ್ಲಿ ಶ್ರಮ ಹಾಕಿದರೂ ಹಣ ಕಡಿಮೆ ಸಿಗುತ್ತದೆ ಎಂದು ಭಾವಿಸಿದ್ದ ಆತ, ಸುಲಭವಾಗಿ ಹಣ ಸಂಪಾದನೆಗೆ ಮನೆಗಳ್ಳತನ ಕೃತ್ಯಕ್ಕಿಳಿದಿದ್ದ. ಅಂತೆಯೇ ಬೆಂಗಳೂರಿಗೆ ತನ್ನ ಸಹಚರರ ಜತೆ ಬಂದು ಆತ, ವಸತಿ ಪ್ರದೇಶಗಳಲ್ಲಿ ಕಾರಿನಲ್ಲಿ ತಿರುಗಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನ ಹಾಕುತ್ತಿದ್ದ. ಇದೇ ರೀತಿ 2018 ರಿಂದ ನಗರದಲ್ಲಿ ಆತ ಮನೆಗಳ್ಳತನ ಕೃತ್ಯಗಳಲ್ಲಿ ಆತ ಸಕ್ರಿಯವಾಗಿದ್ದಾನೆ.

ಈ ಹಿಂದೆ 2020ರಲ್ಲಿ ಆತನನ್ನು ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರ ಬಂದು ಮತ್ತೆ ತನ್ನ ದುಷ್ಕೃತ್ಯಗಳನ್ನು ಆತ ಮುಂದುವರೆಸಿದ್ದ. ಈಗ ಆತನ ಬಂಧನದಿಂದ ಅನ್ನಪೂರ್ಣೇಶ್ವರಿ ನಗರ, ಕೆಂಗೇರಿ, ಜ್ಞಾನಭಾರತಿ, ಆರ್‌ಎಂಸಿ ಯಾರ್ಡ್‌, ಬಾಣಸವಾಡಿ ಹಾಗೂ ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 11 ಪ್ರಕರಣಗಳು ಪತ್ತೆಯಾಗಿವೆ.