ಸಾರಾಂಶ
ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ರಾಜಧಾನಿಯಲ್ಲಿ ಮತ್ತೊಂದು ಅದೇ ಮಾದರಿ ಪ್ರಕರಣ ಬೆಳಕಿಗೆ ಬಂದಿದೆ. ಒಡಿಶಾ ಮೂಲದ ಖ್ಯಾತ ರ್‍ಯಾಪರ್ ಅಪಾರ್ಟ್‌ಮೆಂಟ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾರತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು : ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ರಾಜಧಾನಿಯಲ್ಲಿ ಮತ್ತೊಂದು ಅದೇ ಮಾದರಿ ಪ್ರಕರಣ ಬೆಳಕಿಗೆ ಬಂದಿದೆ. ಒಡಿಶಾ ಮೂಲದ ಖ್ಯಾತ ರ್‍ಯಾಪರ್ ಅಪಾರ್ಟ್‌ಮೆಂಟ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾರತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾಡುಬೀಸನಹಳ್ಳಿಯ ಅಭಿನವ್ ಸಿಂಗ್ (32) ಆತ್ಮಹತ್ಯೆಗೆ ಶರಣಾದ ರ್‍ಯಾಪರ್. ಫೆ.9ರ ರಾತ್ರಿ ಈ ಘಟನೆ ನಡೆದಿದ್ದು, ಮಾರನೇ ದಿನ ಸಂಬಂಧಿ ಹಾಗೂ ಸ್ನೇಹಿತ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸೊಸೆಯ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಮೃತನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಅಭಿನವ್ ಸಿಂಗ್ 3 ವರ್ಷಗಳ ಹಿಂದೆ ಒಡಿಶಾದ ಯುವತಿಯನ್ನು ಮದುವೆಯಾಗಿದ್ದರು. ವರ್ಷದ ಹಿಂದೆ ದಾಂಪತ್ಯದಲ್ಲಿ ಬಿರುಕು ಮೂಡಿ ದಂಪತಿ ಪ್ರತ್ಯೇಕವಾಗಿದ್ದರು. ಕಳೆದ ಆಗಸ್ಟ್‌ನಲ್ಲಿ ಅಭಿನವ್ ಸಿಂಗ್ ವಿರುದ್ಧ ಪತ್ನಿ ಕೌಟುಂಬಿಕ ದೌರ್ಜನ್ಯದ ಆರೋಪದಡಿ ದೂರು ನೀಡಿದ್ದರು. ಬಳಿಕ ಕಳೆದ ಜನವರಿಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದಡಿ ಮತ್ತೊಂದು ದೂರು ನೀಡಿದ್ದರು. ಪತ್ನಿಯ ಮಾನಸಿಕ ಕಿರುಕುಳದಿಂದ ಮನನೊಂದ ಸಿಂಗ್, ಫೆಬ್ರವರಿ ಮೊದಲ ವಾರ ಒಡಿಶಾದಿಂದ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು.
ಸಂಬಂಧಿ ಮನೆಗೆ ಬಂದಾಗ ಘಟನೆ ಬೆಳಕಿಗೆ:
ಫೆ.10ರಂದು ಸಿಂಗ್ ಪಾಲಕರು ಸತತ ಕರೆ ಮಾಡಿದ್ದು, ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ನಗರದಲ್ಲಿರುವ ದೂರದ ಸಂಬಂಧಿ ಅಮಿತ್‌ಗೆ ಕರೆ ಮಾಡಿ, ವಿಷಯ ತಿಳಿಸಿದ್ದಾರೆ. ಬಳಿಕ ಅಮಿತ್ ಹಾಗೂ ಸಿಂಗ್ ಜತೆಗೆ ನೆಲೆಸಿದ್ದ ರಜತ್ ಇಬ್ಬರೂ ಫ್ಲ್ಯಾಟ್‌ಗೆ ತೆರಳಿ ನೋಡಿದಾಗ ಅಭಿನವ್ ಸಿಂಗ್ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳ ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದು, ಒಡಿಶಾದಲ್ಲಿರುವ ಮೃತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಯಾವುದೇ ಮರಣ ಪತ್ರ ಸಿಕ್ಕಿಲ್ಲ. ಮೃತನ ಕುಟುಂಬದ ಸದಸ್ಯರು ಸೊಸೆ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ವಿಷ ತರಿಸಿದ್ದ:
ರ್‍ಯಾಪರ್ ಅಭಿನವ್ ಸಿಂಗ್ ಫೆ.9ರಂದು ಅಮೆಜಾನ್ ಆ್ಯಪ್‌ನಲ್ಲಿ ವಿಷ ಪಾರ್ಸೆಲ್ ತರೆಸಿಕೊಂಡು ರಾತ್ರಿ ಊಟದ ಬಳಿಕ ಆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಅಭಿನವ್ ಬೆಳಗ್ಗೆ 8 ಗಂಟೆಗೆ ಎದ್ದು ಕೆಲಸಕ್ಕೆ ಹೋಗುತ್ತಿದ್ದರು. ಫೆ.10ರಂದು ಬೆಳಗ್ಗೆ 9 ಗಂಟೆಗೆ ತಾಯಿ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಬಳಿಕ ತಂದೆ ಕರೆ ಮಾಡಿದರೂ ಸ್ವೀಕರಿಸಿಲ್ಲ.