ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಾರು ಚಾಲಕನ ಮೇಲೆ ಮಾಲೀಕ ಪಿಸ್ತೂಲ್‌ನಿಂದ ಕಾಲಿಗೆ ಗುಂಡು ಹಾರಿಸಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಾರು ಚಾಲಕನ ಮೇಲೆ ಮಾಲೀಕ ಪಿಸ್ತೂಲ್‌ನಿಂದ ಕಾಲಿಗೆ ಗುಂಡು ಹಾರಿಸಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೀವರ್ಸ್ ಕಾಲೋನಿ ನಿವಾಸಿ ಶ್ರೀನಿವಾಸ್‌ ಅಲಿಯಾಸ್‌ ಮೆಂಟಲ್ ಸೀನ ಗಾಯಗೊಂಡವರು. ಗೊಟ್ಟಿಗೆರೆ ನಿವಾಸಿ ಸಂಪಂಗಿ (54) ಗುಂಡು ಹಾರಿಸಿದವನು.

ಈ ಘಟನೆಯ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಸಂಪಂಗಿ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಸಂಪಗಿ ಅವರ ಬಳಿ ಕಳೆದ ಕೆಲವು ವರ್ಷಗಳಿಂದ ಕಾರು ಚಾಲಕನಾಗಿ ಶ್ರೀನಿವಾಸ್ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಒಂದು ವರ್ಷದಿಂದ ಇಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ಮನಸ್ತಾಪವಾಗಿದ್ದು, ಶ್ರೀನಿವಾಸ್ ಮೇಲೆ ಸಂಪಗಿ ಪ್ರಕರಣವೊಂದನ್ನು ದಾಖಲಿಸಿದ್ದ. ಅದು ತನಿಖೆಯ ಹಂತದಲ್ಲಿದೆ. ಈ ಮಧ್ಯೆ ಆರು ತಿಂಗಳ ಹಿಂದೆ ಕಾರು ಚಾಲಕ ಶ್ರೀನಿವಾಸ್‌ನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದರಿಂದ ಆತ ಆಕ್ರೋಶಗೊಂಡಿದ್ದ.

ಬುಧವಾರ ಸಂಜೆ 7 ಗಂಟೆಯ ಸುಮಾರಿಗೆ ಪಿಳ್ಳಗಾನಹಳ್ಳಿ ನೈಸ್ ಬ್ರಿಡ್ಜ್ ಬಳಿ ತನ್ನ ಮೂವರು ಸಹಚರರೊಂದಿಗೆ ಆಗಮಿಸಿ ಶ್ರೀನಿವಾಸ್‌ನೊಂದಿಗೆ ಮಾತುಕತೆಯಲ್ಲಿ ತೊಡಗಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ಹೋಗಿದೆ. ಈ ವೇಳೆ ಪರವಾನಗಿ ಇದ್ದ ಪಿಸ್ತೂಲ್‌ನಿಂದ ಸಂಪಗಿ ಶ್ರೀನಿವಾಸ್‌ ಮೇಲೆ ಮೂರು ಬಾರಿ ಫೈರಿಂಗ್‌ ಮಾಡಿದ್ದು, ಅದರಲ್ಲಿ ಒಂದು ಗುಂಡು ಶ್ರೀನಿವಾಸ್ ಕಾಲಿಗೆ ತಗುಲಿದೆ. ಗಾಯಗೊಂಡಿದ್ದ ಶ್ರೀನಿವಾಸ್‌ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಕೋಣನಕುಂಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿ ಆರೋಪಿ ಸಂಪಗಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೋಟೊ))) ಸಿಟಿ))) ಫೈರ್-1,2)))