ಸಾರಾಂಶ
ಬೆಂಗಳೂರು : ಬಸ್ ನಿಲ್ದಾಣಗಳು ಹಾಗೂ ಬಾರ್‌ಗಳ ಬಳಿ ಸಾರ್ವಜನಿಕರ ಮೊಬೈಲ್‌ಗಳು ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಡೇಪಾಳ್ಯದ ಚಂದ್ರು(20) ಮತ್ತು ಶಿವಕುಮಾರ್(21) ಬಂಧಿತರು. ಆರೋಪಿಗಳಿಂದ 13 ಲಕ್ಷ ರು. ಮೌಲ್ಯದ 20 ಮೊಬೈಲ್‌ಗಳು ಹಾಗೂ 15 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ರೂಪೇನಾ ಅಗ್ರಹಾರ ಬಸ್ ನಿಲ್ದಾನದಲ್ಲಿ ವ್ಯಕ್ತಿಯೊಬ್ಬರು ಬಸ್ ಹತ್ತುವಾಗ ದುಷ್ಕರ್ಮಿಗಳು ಮೊಬೈಲ್ ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ತನಿಖೆ ವೇಳೆ ಬಾತ್ಮೀದಾರರು ನೀಡಿದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಇತ್ತೀಚೆಗೆ ಗಾರೆಬಾವಿಪಾಳ್ಯ ಬಸ್ ನಿಲ್ದಾಣದ ಬಳಿ ಇಬ್ಬರು ವ್ಯಕ್ತಿಗಳನ್ನು ನಾಲ್ಕು ಮೊಬೈಲ್‌ಗಳ ಸಮೇತ ವಶಕ್ಕೆ ಪಡೆದಿದ್ದಾರೆ. ಬಳಿಕ ವಿಚಾರಣೆ ಮಾಡಿದಾಗ ಮೊಬೈಲ್ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಅಂತೆಯೆ ನಗರದ ವಿವಿಧೆಡೆ ಮೊಬೈಲ್‌ಗಳು ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.
ಹೆಚ್ಚಿನ ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಮಡಿವಾಳ ಕೆರೆ ಪಕ್ಕ ಖಾಲಿ ಜಾಗ ಹಾಗೂ ಸಮಾಧಿಯೊಂದರ ಬಳಿ ನಿಲುಗಡೆ ಮಾಡಿದ್ದ 15 ದ್ವಿಚಕ್ರ ವಾಹನಗಳು ಹಾಗೂ ಆ ದ್ವಿಚಕ್ರ ವಾಹನಗಳ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದ 16 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಟು ಬೈಕ್, ಒಂದು ಮೊಬೈಲ್ ಕಳವು ಪ್ರಕರಣ ಪತ್ತೆ: ಆರೋಪಿಗಳ ಬಂಧನದಿಂದ ಬೇಗೂರು ಠಾಣೆ ಎರಡು, ಪರಪ್ಪನ ಅಗ್ರಹಾರ, ಎಚ್‌ಎಸ್‌ಆರ್ ಲೇಔಟ್, ಮಾರತಹಳ್ಳಿ, ಕಲಾಸಿಪಾಳ್ಯ, ರಾಜಗೋಪಾಲನಗರ, ಮಲೆಮಹದೇಶ್ವರ ಬೆಟ್ಟ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಸೇರಿ ಒಟ್ಟು 8 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಮತ್ತು ಬೊಮ್ಮನಹಳ್ಳಿ ಠಾಣೆಯ ಒಂದು ಮೊಬೈಲ್ ಕಳವು ಪ್ರಕರಣ ಪತ್ತೆಯಾಗಿದೆ. ಉಳಿದ 19 ಮೊಬೈಲ್‌ಗಳು ಹಾಗೂ 7 ದ್ವಿಚಕ್ರ ವಾಹನಗಳ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾರ್‌ಗಳ ಬಳಿ ಬೈಕ್ ಕಳವು: ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದಾರೆ. ಈ ಹಿಂದೆ ಕಳವು ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳು ಜಾಮೀನು ಪಡೆದು ಹೊರಗೆ ಬಂದ ಬಳಿಕವೂ ನಗರದ ವಿವಿಧೆಡೆ ತಮ್ಮ ಕಳವು ಪ್ರವೃತ್ತಿ ಮುಂದುವರೆಸಿದ್ದರು. ಸಾರ್ವಜನಿಕರು ಬಾರ್‌ಗಳ ಬಳಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನೇ ಟಾರ್ಗೆಟ್ ಮಾಡಿ ಕಳವು ಮಾಡುತ್ತಿದ್ದರು. ಅಂತೆಯೇ ಪ್ರಯಾಣಿಕರ ದಟ್ಟಣೆ ಇರುವ ಬಸ್ಸುಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರ ಮೊಬೈಲ್‌ಗಳನ್ನು ಎಗರಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.