ಸಾರಾಂಶ
ಬೆಂಗಳೂರು : ವೈಯಕ್ತಿಕ ಕಾರಣ ಹಿನ್ನಲೆಯಲ್ಲಿ ಪರಿಚಿತರ ಅಂತ್ಯಕ್ರಿಯೆಗೆ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬನನ್ನು ಆತನ ಸ್ನೇಹಿತರೇ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಮಾರ್ಕಂಡೇಶ್ವರ ನಗರದ ನಿವಾಸಿ ಶರತ್ ಕುಮಾರ್ (30) ಕೊಲೆಯಾದ ದುರ್ದೈವಿ. ಈ ಹತ್ಯೆ ಎಸಗಿ ಪರಾರಿಯಾಗಿರುವ ಮೃತನ ಸ್ನೇಹಿತ ಶರತ್ ಸೇರಿದಂತೆ ನಾಲ್ವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಂಜನಪ್ಪ ಗಾರ್ಡನ್‌ನಲ್ಲಿ ಮೃತಪಟ್ಟಿದ್ದ ಪರಿಚಿತನ ಅಂತಿಮ ದರ್ಶನಕ್ಕೆ ಬೆಳಗ್ಗೆ ಶರತ್ ಬಂದಿದ್ದಾಗ ಈ ಕೃತ್ಯ ನಡೆದಿದೆ.
ಮೃತ ಶರತ್ ಅಪರಾಧ ಹಿನ್ನಲೆಯವನಾಗಿದ್ದು, ಆತನ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಈ ಮೊದಲು ಅಂಜನಾಪ್ಪ ಗಾರ್ಡನ್‌ನಲ್ಲಿ ನೆಲೆಸಿದ್ದ ಶರತ್, ಕೆಲ ತಿಂಗಳ ಹಿಂದೆ ತಮ್ಮ ಕುಟುಂಬ ಸಮೇತ ಮಾರ್ಕೆಂಡೇಶ್ವರ ನಗರಕ್ಕೆ ಬಂದು ವಾಸವಾಗಿದ್ದ. ಆದರೆ ಈ ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ.
ಅಂಜನಾಪ್ಪ ಗಾರ್ಡನ್‌ನಲ್ಲಿ ಶರತ್‌ನ ಪರಿಚಿತರು ಮೃತಪಟ್ಟಿದ್ದರು. ಈ ವಿಷಯ ತಿಳಿದ ಆತ, ಮೃತ ಸಂಬಂಧಿಯ ಅಂತಿಮ ದರ್ಶನಕ್ಕೆ ಬಂದಿದ್ದ. ಆ ವೇಳೆ ವೈಯಕ್ತಿಕ ಕಾರಣಕ್ಕೆ ಆರೋಪಿ ಶರತ್ ಹಾಗೂ ಮೃತ ಶರತ್ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿಗಳು, ಶರತ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಆಗ ತೀವ್ರ ರಕ್ತಸ್ರಾವದಿಂದ ಶರತ್ ಕೊನೆಯುಸಿರೆಳೆದಿದ್ದಾನೆ.