ಗುಂಡಾಪುರದಲ್ಲಿ ಚಿರತೆ ದಾಳಿ ಸಾಕು ನಾಯಿ ಬಲಿ

| Published : Oct 18 2023, 01:01 AM IST / Updated: Oct 18 2023, 01:02 AM IST

ಸಾರಾಂಶ

ಗುಂಡಾಪುರದಲ್ಲಿ ಚಿರತೆ ದಾಳಿ ಸಾಕು ನಾಯಿ ಬಲಿ, ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ, ಸಾಕು ಪ್ರಾಣಿಗಳಿಗೆ ರಕ್ಷಣೆ ಇಲ್ಲ
- ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ, ಸಾಕು ಪ್ರಾಣಿಗಳಿಗೆ ರಕ್ಷಣೆ ಇಲ್ಲ ಕನ್ನಡಪ್ರಭ ವಾರ್ತೆ ಹಲಗೂರು ಚಿರತೆ ದಾಳಿ ಮಾಡಿ 20 ಸಾವಿರ ರು. ಬೆಲೆ ಬಾಳುವ ರಿಯೋ ಸಾಕು ನಾಯಿಯನ್ನು ಹೊಯ್ದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಘಟನೆ ಗುಂಡಾಪುರದ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಲಾಪ್ರಿಯರಾಜು ಅವರು ತೋಟದ ಫಾರಂ ಹೌಸ್ ಮಾಡಿಕೊಂಡು ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದರು. ಕಾರ್ಯನಿಮಿತ್ತ ಮೈಸೂರಿಗೆ ಹೋಗಿ ವಾಪಸ್ ಬಂದ ವೇಳೆ ಮನೆ ಬಾಗಿಲು ತೆಗೆದಾಗ ಮನೆಯಲ್ಲಿದ್ದ ನಾಯಿ ಹೊರ ಬಂದಿದೆ. ಸೋಮವಾರ ತಡರಾತ್ರಿ ಬಸವನ ಬೆಟ್ಟದಿಂದ ಬಂದು ಹತ್ತಿರದ ಪೊದೆಯಲ್ಲಿ ಅವಿತಿತ್ತ ಚಿರತೆ ನಾಯಿಯನ್ನು ಕಂಡ ತಕ್ಷಣ ಕತ್ತಿನ ಭಾಗ ಹಿಡಿದು ಕಾಡಿನೊಳಗೆ ಪರಾರಿಯಾಗಿದೆ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಳ: ಈ ಕುರಿತು ಮಾತನಾಡಿದ ಕಲಾಪ್ರಿಯ ರಾಜು, ಬಸವನ ಬೆಟ್ಟದಿಂದ ಬರುವ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಕೆಲ ದಿನಗಳ ಹಿಂದೆ ಮೂರು ಕಾಡಾನೆಗಳು ಬಂದು ನಮ್ಮ ತೋಟದಲ್ಲಿದ್ದ ಬೆಳೆಯನ್ನು ನಾಶ ಪಡಿಸಿರುವುದರಿಂದ ಅಪಾರ ನಷ್ಟವಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ ಎಂದರು. ಕಾಡಂದಿಗಳು ಜಮೀನಿನಲ್ಲಿ ಹಾಕಿದ್ದ ತೆಂಗಿನ ಕಾಯಿಗಳನ್ನು ಸುಲಿದು ಕಾಯನ್ನು ತಿಂದು ಹೋಗಿವೆ. ಸುತ್ತಮುತ್ತಲಿನ ರೈತರು ಕಾಡುಪ್ರಾಣಿಗಳ ಹಾವಳಿಯಿಂದ ವ್ಯವಸಾಯ ಮಾಡುವುದನ್ನು ಬಿಟ್ಟು ಪಟ್ಟಣ ಪ್ರದೇಶಗಳಿಗೆ ಗುಳ್ಳೆ ಹೋಗುತ್ತಿದ್ದಾರೆ ಎಂದರು. ಮಳೆ ಆಶ್ರಯದಲ್ಲೇ ಇಲ್ಲಿನ ರೈತರು ವ್ಯವಸಾಯ ಮಾಡಬೇಕಾಗಿದೆ. ಮಳೆ ಸಕಾಲಕ್ಕೆ ಆದರೆ ಫಸಲು ಬರುತ್ತದೆ. ಬಂದ ಫಸಲು ಕಾಡುಪ್ರಾಣಿಗಳ ಪಾಲಾಗುತ್ತಿದೆ. ಬೆಳೆ ಹಾಗೂ ಸಾಕು ಪ್ರಾಣಿಗಳಿಗೂ ರಕ್ಷಣೆ ಇಲ್ಲದಂತಾಗಿದೆ. ಅರಣ್ಯ ಇಲಾಖೆಯವರು ಇದರ ಕಡೆ ಗಮನ ಹರಿಸಿ ನಮ್ಮ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ. 17ಕೆಎಂಎನ್ ಡಿ26,27 ಚಿರತೆ ದಾಳಿ ಮಾಡಿ ನಾಯಿ ಮರಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿರುವುದು. ಕಾಡಾನೆಗಳು ತೋಟಕ್ಕೆ ಬಂದಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು.