ಸಾರಾಂಶ
ರೇಣುಕಾ ಸ್ವಾಮಿ ಕೊಲೆಯಾದ ಘಟನಾ ಸ್ಥಳದಲ್ಲಿ ನಟ ದರ್ಶನ್ ಇದ್ದ ಬಗ್ಗೆ ಫೋಟೋ ಸಿಕ್ಕಿದ್ದು ಅದನ್ನು ಎಫ್‌ಎಸ್ಎಲ್ ಪರೀಕ್ಷೆಗಾಗಿ ಹೈದರಾಬಾದ್‌ಗೆ ಕಳುಹಿಸಲಾಗಿದೆ.
ಬೆಂಗಳೂರು : ರೇಣುಕಾ ಸ್ವಾಮಿ ಕೊಲೆಯಾದ ಘಟನಾ ಸ್ಥಳದಲ್ಲಿ ನಟ ದರ್ಶನ್ ಇದ್ದ ಬಗ್ಗೆ ಫೋಟೋ ಸಿಕ್ಕಿದ್ದು ಅದನ್ನು ಎಫ್‌ಎಸ್ಎಲ್ ಪರೀಕ್ಷೆಗಾಗಿ ಹೈದರಾಬಾದ್‌ಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಅದರ ಆಧಾರದ ಮೇಲೆಯೇ ಜಾಮೀನು ರದ್ದು ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಘಟನಾ ಸ್ಥಳದಲ್ಲಿ ಇದ್ದ ಬಗ್ಗೆ ಫೋಟೋ ಸಿಕ್ಕಿದೆ. ಯಾರೋ ವಿಡಿಯೋ ಮಾಡುತ್ತಿರುವುದೂ ಲಭ್ಯವಾಗಿದೆ. ಅವುಗಳನ್ನು ಪರೀಕ್ಷೆಗೆ ಕಳುಹಿಸಿದ್ದು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಜಾಮೀನು ರದ್ದು ಮಾಡುವಂತೆ ಕೋರುತ್ತೇವೆ ಎಂದು ಹೇಳಿದರು.
ಇನ್ನು ಶಸ್ತ್ರಚಿಕಿತ್ಸೆ ಕಾರಣ ನೀಡಿ ಅವರು ಜಾಮೀನು ಪಡೆದಿದ್ದಾರೆ. ಒಂದೆರಡು ದಿನದಲ್ಲೇ ಶಸ್ತ್ರಚಿಕಿತ್ಸೆ ನಡೆಸಬೇಕು, ಇಲ್ಲದಿದ್ದರೆ ಬೆನ್ನು ಮುರಿದು ಹೋಗುತ್ತದೆ ಎಂದು ಹೇಳಿದ್ದರು. ಇದರ ಆಧಾರದ ಮೇಲೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ ಇಷ್ಟು ದಿನ ಆದರೂ ವೈದ್ಯರು ಅದಕ್ಕೆ ಕೈ ಹಾಕಿಲ್ಲ. ಈ ಬಗ್ಗೆಯೂ ಹೇಳಿ ಜಾಮೀನು ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತೇವೆ ಎಂದರು.