ಬೀಗ ಹಾಕಿದ ಮನೆಗಳು ಹಾಗೂ ಕಚೇರಿಗಳ ಬೀಗ ಮುರಿದು ಕಳವು ಮಾಡುತ್ತಿದ್ದ ನಾಲ್ವರು ಸೆರೆ

| Published : Aug 17 2024, 01:50 AM IST / Updated: Aug 17 2024, 04:34 AM IST

ಸಾರಾಂಶ

ಬೀಗ ಹಾಕಿದ ಮನೆಗಳು ಹಾಗೂ ಕಚೇರಿಗಳ ಬೀಗ ಮುರಿದು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಬೀಗ ಹಾಕಿದ ಮನೆಗಳು ಹಾಗೂ ಕಚೇರಿಗಳ ಬೀಗ ಮುರಿದು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಳೇ ಬೈಯಪ್ಪನಹಳ್ಳಿಯ ಅರುಣ್‌(23), ಅಜಯ್‌(24), ಪ್ರತಾಪ್‌(25) ಹಾಗೂ ಸಾಯಿ ಅಲಿಯಾಸ್‌ ಅಪ್ಪು(25) ಬಂಧಿತರು. ಆರೋಪಿಗಳಿಂದ ₹4 ಲಕ್ಷ ಮೌಲ್ಯದ 24 ಗ್ರಾಂ ಚಿನ್ನಾಭರಣಗಳು, ದ್ವಿಚಕ್ರ ವಾಹನ ಹಾಗೂ ವಿವಿಧ ಕಂಪನಿಗಳ 11 ಲ್ಯಾಪ್‌ಟಾಪ್‌ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕಾಡುಗೋಡಿಯ ಕಂಪನಿಯೊಂದರ ಕಚೇರಿ ಬೀಗ ಮುರಿದು 20 ಲ್ಯಾಪ್‌ಟಾಪ್‌ಗಳು, ವಾಷ್‌ ರೂಮ್‌ ಟ್ಯಾಪ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ತನಿಖೆ ವೇಳೆ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಹಲಸೂರಿನ ಲಕ್ಷ್ಮೀಪುರದ ಹರಿಶ್ಚಂದ್ರ ಸ್ಮಶಾನದ ಬಳಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಮತ್ತಿಬ್ಬರು ಕಳ್ಳತನದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಬಳಿಕ ಆ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ನಾಲ್ವರು ಆರೋಪಿಗಳ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಸ್ಮಶಾನದ ಮಂಟಪದ ಬಳಿ ದ್ವಿಚಕ್ರ ವಾಹನ, ವಿವಿಧ ಕಂಪನಿಗಳ 11 ಲ್ಯಾಪ್‌ಟಾಪ್‌, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿಯ ಟೀ ಅಂಗಡಿ ಮಾಲೀಕನ ಬಳಿ ಅಡಮಾನವಿರಿಸಿದ್ದ 24 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು, ನಗರದ ವಿವಿಧೆ ಸುತ್ತಾಡಿ ಬೀಗ ಹಾಕಿದ ಮನೆಗಳು ಹಾಗೂ ಕಚೇರಿಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡುತ್ತಿದ್ದರು. ಬಳಿಕ ಕದ್ದ ಮಾಲುಗಳನ್ನು ವಿಲೇವಾರಿ ಮಾಡಿ ಬಂದ ಹಣವನ್ನು ಹಂಚಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.