ಸಾರಾಂಶ
ಬೆಂಗಳೂರು : ಅಧಿಕ ಬಡ್ಡಿ ಆಸೆ ತೋರಿಸಿ ನೂರಾರು ಜನರಿಗೆ ವಂಚಿಸಿ ಪರಾರಿ ಆಗಿರುವ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲಿಕ ಹಾಗೂ ವ್ಯವಸ್ಥಾಪಕ ನಿರ್ದೇಶಕನ ಕುರಿತು ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಸಿಸಿಬಿ ಪೊಲೀಸರು ಮನವಿ ಮಾಡಿದ್ದಾರೆ.
ವಿಜಯನಗರದ ಎಂಸಿ ಲೇಔಟ್ 5ನೇ ಅಡ್ಡರಸ್ತೆಯ ಅಕ್ಷಯ್ ಫಾರ್ಚೂನ್ ಡೆಲವಪರ್ಸ್ ಸಂಸ್ಥೆಯ ಮಾಲಿಕ ಜಿ.ಮುನಿರಾಜು ಹಾಗೂ ವ್ಯವಸ್ಥಾಪಕ ಮಂಜು ನಾಪತ್ತೆಯಾಗಿದ್ದು, ಆರೋಪಿಗಳ ಪತ್ತೆಗೆ ಸಿಸಿಬಿ ಹುಡುಕಾಟ ನಡೆಸಿದೆ. ತಮ್ಮ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೆ ಶೇ.25ರಷ್ಟು ಲಾಭಾಂಶ ಕೊಡುವುದಾಗಿ ನಂಬಿಸಿ ಜನರಿಗೆ ಆರೋಪಿಗಳು ವಂಚಿಸಿದ್ದಾರೆ. ಈ ಬಗ್ಗೆ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸಿಸಿಬಿ ತನಿಖೆ ನಡೆಸುತ್ತಿದೆ ಎಂದು ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.
ಈ ಆರೋಪಿಗಳ ಕುರಿತು ಮಾಹಿತಿ ಇದ್ದರೆ ಜಂಟಿ ಆಯುಕ್ತರು 94808 01011, ಸಿಸಿಬಿ ಡಿಸಿಪಿ2 94808 01021 ಹಾಗೂ 94808 01029 ಗೆ ಕರೆ ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.ಮುನಿರಾಜು ವಿರುದ್ಧ ದೂರುಗಳು
ಈ ಹಿಂದೆ ಕೂಡಾ ಇದೇ ರೀತಿ ಅಧಿಕ ಲಾಭಾಂಶದ ಆಸೆ ತೋರಿಸಿ ಜನರಿಗೆ ವಂಚಿಸಿರುವ ಬಗ್ಗೆ ಮುನಿರಾಜು ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಈಗ ಮತ್ತೆ ಆತ ವಂಚನೆ ಕೃತ್ಯ ಮುಂದುವರೆಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.