ಸಾರಾಂಶ
ಬೆಂಗಳೂರು: ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಸದಸ್ಯತ್ವ ಕೊಡಿಸುವುದಾಗಿ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ಲೆಟರ್ ಹೆಡ್ ಬಳಸಿ ಸರ್ಕಾರಿ ಕಾಲೇಜಿನ ಮಹಿಳಾ ಉಪನ್ಯಾಸಕಿಗೆ ₹4.10 ಕೋಟಿ ಪಡೆದು ವಂಚಿಸಿದ್ದ ತೋಟಗಾರಿಕೆ ಇಲಾಖೆಯ ನೌಕರ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತೋಟಗಾರಿಕೆ ಇಲಾಖೆ ಕಚೇರಿ ನೌಕರ ಸಿ.ಚಂದ್ರಪ್ಪ, ಬೆಂಗಳೂರು ಹೊರವಲಯದ ತಾವರೆಕೆರೆ ಸಮೀಪದ ಭುವನಪ್ಪ ಲೇಔಟ್ ನಿವಾಸಿ ರಿಯಾಜ್ ಅಹ್ಮದ್, ಬೆಂಗಳೂರಿನ ಯೂಸಫ್ ಸುಬ್ಬೆಕಟ್ಟೆ, ಕನಕಪುರದ ರುದ್ರೇಶ್ ಬಂಧಿತರಾಗಿದ್ದು, ಆರೋಪಿಗಳಿಂದ ₹40 ಲಕ್ಷ ನಗದು ಹಾಗೂ ನಾಲ್ಕು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಈ ಕೃತ್ಯ ಎಸಗಿ ತಪ್ಪಿಸಿಕೊಂಡಿರುವ ಚೇತನ್, ಶಂಕರ್, ಮಹೇಶ ಹಾಗೂ ಹರ್ಷವರ್ಧನ್ ಪತ್ತೆ ತನಿಖೆ ಮುಂದುವರೆದಿದೆ. ಕೆಲ ದಿನಗಳ ಹಿಂದೆ ಕಲಬುರಗಿ ನಗರದ ಸರ್ಕಾರಿ ಕಾಲೇಜಿನ ಚಿತ್ರಕಲಾ ವಿಭಾಗದ ಮಹಿಳಾ ಉಪನ್ಯಾಸಕಿಗೆ ಕೆಪಿಎಸ್‌ಸಿ ಸದಸ್ಯತ್ವದ ಹೆಸರಿನಲ್ಲಿ ರಿಯಾಜ್ ತಂಡ ವಂಚಿಸಿತ್ತು. ಈ ಬಗ್ಗೆ ತನಿಖೆ ನಡೆಸಿ ಮೊಬೈಲ್ ಕರೆಗಳು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಸಿಸಿಬಿ ತಂಡ ಪತ್ತೆ ಹಚ್ಚಿದೆ.
ರಾಜಕಾರಣಿ ಮನೆಯಲ್ಲಿ ಗಾಳ:
ಸರ್ಕಾರಿ ಹುದ್ದೆ, ಉದ್ಯೋಗ ಹಾಗೂ ಕಾಮಗಾರಿ ಗುತ್ತಿಗೆ ಹೀಗೆ ಜನರಿಗೆ ಆಸೆ ತೋರಿಸಿ ವಂಚಿಸಿ ಹಣ ಸಂಪಾದಿಸುವುದನ್ನೇ ರಿಯಾಜ್ ಗ್ಯಾಂಗ್ ದಂಧೆ ಮಾಡಿಕೊಂಡಿತ್ತು. ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಪ್ರಭಾವಿ ರಾಜಕಾರಣಿಯೊಬ್ಬರ ಭೇಟಿಗೆ ಕೆಲಸದ ನಿಮಿತ್ತ ಬಂದಿದ್ದ ಉಪನ್ಯಾಸಕಿಯನ್ನು ರಿಯಾಜ್ ತಂಡ ಪರಿಚಯ ಮಾಡಿಕೊಂಡಿದೆ. ಬಳಿಕ ತಮಗೆ ಮುಖ್ಯಮಂತ್ರಿಗಳು ಸೇರಿದಂತೆ ಸರ್ಕಾರದ ಮಟ್ಟದಲ್ಲಿ ಪ್ರಭಾವಿಗಳ ಜತೆ ಸ್ನೇಹವಿದೆ ಎಂದು ರಿಯಾಜ್ ತಂಡ ಹೇಳಿತ್ತು.
ಈ ನಾಜೂಕಿನ ಮಾತಿಗೆ ಮರುಳಾದ ಅವರಿಗೆ ಕೆಪಿಎಸ್‌ಸಿ ಸದಸ್ಯತ್ವ ಕೊಡಿಸುವುದಾಗಿ ಹೇಳಿದ ಆರೋಪಿಗಳು, ಇದಕ್ಕೆ ₹5 ಕೋಟಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಗೆ ಒಪ್ಪಿದ ಉಪನ್ಯಾಸಕಿಯಿಂದ ಹಂತ ಹಂತವಾಗಿ ₹4.10 ಕೋಟಿಯನ್ನು ಆರೋಪಿಗಳು ವಸೂಲಿ ಮಾಡಿದ್ದರು. ಈ ಹಣ ಸಂದಾಯವಾದ ಬಳಿಕ ಅವರಿಗೆ ನಿಮಗೆ ಕೆಪಿಎಸ್‌ಸಿ ಸದಸ್ಯತ್ವ ಕೊಡಲು ಮುಖ್ಯಮಂತ್ರಿಗಳ ಟಿಪ್ಪಣಿ ಕೊಟ್ಟಿದ್ದಾರೆ. ಸಚಿವ ಸಂಪುಟದ ನಡಾವಳಿಯಲ್ಲಿ ಉಲ್ಲೇಖವಾಗಿದೆ ಎಂದು ಹೇಳಿ ನಕಲಿ ದಾಖಲೆ ಸೃಷ್ಟಿಸಿ ನೀಡಿದ್ದರು.
ಕೊನೆಗೆ ರಾಜ್ಯಪಾಲರ ಹೆಸರಿನಲ್ಲಿ ರಾಜ್ಯಪತ್ರವನ್ನು ಸೃಷ್ಟಿಸಿ ಉಪನ್ಯಾಸಕಿಗೆ ಆರೋಪಿಗಳು ಕೊಟ್ಟಿದ್ದರು. ಈ ದಾಖಲೆಗಳನ್ನು ಪರಿಶೀಲಿಸಿದಾಗ ಉಪನ್ಯಾಸಕಿಗೆ ವಂಚನೆಗೆ ಒಳಗಾಗಿರುವ ಸಂಗತಿ ಅರಿವಾಗಿದೆ. ಈ ಬಗ್ಗೆ ಸಿಸಿಬಿ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದರು. ಅದರನ್ವಯ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಕ್ರಿಮಿನಲ್ ಹಿನ್ನಲೆ
ಈ ಬಂಧಿತ ಆರೋಪಿಗಳ ಪೈಕಿ ರಿಯಾಜ್ ವಿರುದ್ಧ ಈ ಹಿಂದೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಇನ್ನುಳಿದ ಆರೋಪಿಗಳು ಮೋಸ ಮಾಡುವುದನ್ನೇ ದಂಧೆಯಾಗಿಸಿಕೊಂಡಿದ್ದರು. ಹಣದಾಸೆಗೆ ತೋಟಗಾರಿಕೆ ಇಲಾಖೆಯ ನೌಕರ, ಚಿಕ್ಕಮಗಳೂರು ಜಿಲ್ಲೆ ಕಳಸದ ಚಂದಪ್ಪ ಸಾಥ್ ಕೊಟ್ಟಿದ್ದ. ತಪ್ಪಿಸಿಕೊಂಡಿರುವ ಆರೋಪಿಗಳು ಪತ್ತೆಯಾದರೆ ಈ ವಂಚನೆ ಜಾಲದ ಮತ್ತಷ್ಟು ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋಸ ಹೋಗಿದ್ದು ಹೇಗೆ?
ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗ ವಿಧಾನಸೌಧದ ಕಾರಿಡಾರ್‌ನಲ್ಲಿ ಮೊದಲು ಉಪನ್ಯಾಸಕಿಗೆ ರಿಯಾಜ್ ಪರಿಚಯವಾಗುತ್ತದೆ. ಬಳಿಕ ಆತನ ಬಳಿ ತಾನು ಕೆಪಿಎಸ್‌ಸಿ ಸದಸ್ಯತ್ವದ ಆಕಾಂಕ್ಷಿ ಆಗಿರುವುದಾಗಿ ಅವರು ಹೇಳಿದ್ದರು. ಆಗ ನಿಮಗೆ ಸಹಾಯ ಮಾಡುವುದಾಗಿ ಹೇಳಿದ ರಿಯಾಜ್, ಮತ್ತೊಬ್ಬ ದಲ್ಲಾಳಿ ಯೂಸಫ್‌ನನ್ನು ಉಪನ್ಯಾಸಕಿಗೆ ಪರಿಚಯಿಸಿದ್ದ. ತನಗೆ ರಾಜಕಾರಣಿಗಳ ಸ್ನೇಹವಿದೆ. ನಿಮಗೆ ಹುದ್ದೆ ಕೊಡಿಸುವುದಾಗಿ ನಂಬಿಸಿ ₹1 ಕೋಟಿಯನ್ನು ಯೂಸಫ್ ಪಡೆದ. ಆದರೆ ಹೇಳಿದಂತೆ ಆತ ಹುದ್ದೆ ಕೊಡಿಸಲಿಲ್ಲ.
ಕೊನೆಗೆ ತನ್ನ ಹಣ ಕೊಡುವಂತೆ ಆರೋಪಿಗಳಿಗೆ ಸಂತ್ರಸ್ತೆ ದುಂಬಾಲು ಬಿದ್ದರು. ಅದೇ ಹೊತ್ತಿಗೆ ವಿಧಾನಸೌಧದಲ್ಲಿ ರಿಯಾಜ್‌ಗೆ ರುದ್ರೇಶ್ ಮತ್ತು ಚಂದ್ರಪ್ಪ ಸಂಪರ್ಕಕ್ಕೆ ಬಂದಿದ್ದಾರೆ. ಈ ಇಬ್ಬರು ತಾವು ಕೆಪಿಎಸ್‌ಸಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಮತ್ತೆ ₹3 ಕೋಟಿ ವಸೂಲಿ ಮಾಡಿದ್ದರು. ಆದರೆ ಹಣ ನೀಡಿದರೂ ಹುದ್ದೆ ಸಿಗದೆ ಹೋದಾಗ ಸಂತ್ರಸ್ತೆ, ತಾನು ಪೊಲೀಸ್ ದೂರು ಕೊಡುವುದಾಗಿ ಬೆದರಿಸಿದ್ದಾರೆ. ಆಗ ಮುಖ್ಯಮಂತ್ರಿ, ರಾಜ್ಯಪಾಲರ ಹೆಸರು ಬಳಸಿ ನಕಲಿ ನೇಮಕಾತಿ ಪತ್ರವನ್ನು ಸಂತ್ರಸ್ತೆ ಕೊಟ್ಟು ಟೋಪಿ ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಚುನಾವಣೆಯಲ್ಲಿ ನಿಂತು ಸೋತ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕನಕಪುರದ ರುದ್ರೇಶ್ ಪರಾಜಿತನಾಗಿದ್ದ. ಆಗ ಆತನಿಗೆ ತೋಟಗಾರಿಕೆ ಇಲಾಖೆಯ ನೌಕರ ಚಂದ್ರಪ್ಪ ಪರಿಚಯವಾಗಿತ್ತು. ವಿಧಾನಸೌಧದಲ್ಲಿ ತನ್ನ ಮುಂಬಡ್ತಿ ಕಡತ ವಿಲೇವಾರಿಗೆ ಓಡಾಡುತ್ತಿದ್ದ ಚಂದ್ರಪ್ಪನಿಗೆ ಕೆಪಿಎಸ್‌ಸಿ ವಂಚನೆ ಜಾಲಕ್ಕೆ ರುದ್ರೇಶ್ ಬಳಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಕೆಪಿಎಸ್‌ಸಿ ಸದಸ್ಯತ್ವದ ಕೊಡಿಸುವುದಾಗಿ ವಂಚನೆ ಕೃತ್ಯವು ನಯ ವಂಚಕರ ಜಾಲವಾಗಿದೆ. ಈ ಮೋಸ ಜಾಲದಿಂದ ವಂಚನೆಗೆ ಒಳಗಾದವರು ದೂರು ನೀಡಿದರೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ.
-ಬಿ.ದಯಾನಂದ್, ಪೊಲೀಸ್ ಆಯುಕ್ತ, ಬೆಂಗಳೂರು