ದುಬಾರಿ ಬಡ್ಡಿಗೆ ಸಾಲ ನೀಡುತ್ತಿದ್ದ ತಂದೆ-ಮಕ್ಕಳು: ಸಿಸಿಬಿ ದಾಳಿ

| Published : Apr 03 2024, 01:39 AM IST / Updated: Apr 03 2024, 05:21 AM IST

ಸಾರಾಂಶ

ಸಾಲ ನೀಡಿ ಅತ್ಯಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಅಪ್ಪ ಮಕ್ಕಳ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಸಿಸಿಬಿ ಅವರ ಮನೆ ಮೇಲೆ ದಾಳಿ ನಡೆಸಿದೆ. ಈ ವೇಳೆ 100ಕ್ಕೂ ಅಧಿಕ ಬ್ಯಾಂಕ್‌ ಚೆಕ್‌, ಇನ್ನಿತರ ದಾಖಲೆ ಜಪ್ತಿ ಮಾಡಲಾಗಿದೆ.

 ಬೆಂಗಳೂರು:  ದುಬಾರಿ ಬಡ್ಡಿಗೆ ಸಾಲ ನೀಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ರಿಯಲ್ ಎಸ್ಟೇಟ್‌ ಏಜೆಂಟ್‌ವೊಬ್ಬನ ಮನೆ ಮೇಲೆ ದಾಳಿ ನಡೆಸಿ ಸಿಸಿಬಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಶಾಮಣ್ಣ ಗಾರ್ಡನ್‌ ನಿವಾಸಿ ಶ್ರೀರಾಮ, ಆತನ ಮಕ್ಕಳಾದ ದಿಲೀಪ್ ಹಾಗೂ ಕಲ್ಯಾಣ ಕುಮಾರ್ ಮೇಲೆ ಅಕ್ರಮ ಬಡ್ಡಿ ದಂಧೆ ಆರೋಪ ಬಂದಿದ್ದು, ಈ ದಾಳಿ ವೇಳೆ ಆರೋಪಿಗಳಿಂದ ವಿವಿಧ ಬ್ಯಾಂಕ್‌ಗಳ ಸುಮಾರು 100 ಚೆಕ್‌ಗಳು, ವಾಹನ ಆರ್‌ಸಿ ಕಾರ್ಡ್‌ಗಳು, ಆನ್ ಡಿಮ್ಯಾಂಡ್ ಪ್ರಾಮಿಸರಿ ನೋಟ್‌, ಆಸ್ತಿ ಪತ್ರಗಳು ಹಾಗೂ ಭೂ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಈ ಅಕ್ರಮ ಬಡ್ಡಿ ವ್ಯವಹಾರದ ಬಗ್ಗೆ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದರು. ಅದರನ್ವಯ ಶಾಮಣ್ಣ ಗಾರ್ಡನ್‌ನಲ್ಲಿ ಇರುವ ಆರೋಪಿಗಳ ಮನೆ ಮೇಲೆ ಸಿಸಿಬಿ ದಾಳಿ ನಡೆಸಿತು. ಈ ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.

ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ತಂದೆ-ಮಕ್ಕಳು, ಕೆಲ ವರ್ಷಗಳಿಂದ ಸುಲಭವಾಗಿ ಹಣ ಸಂಪಾದನೆಗೆ ಅಕ್ರಮ ಬಡ್ಡಿ ದಂಧೆಯಲ್ಲಿ ತೊಡಗಿದ್ದರು. 100ಕ್ಕೂ ಹೆಚ್ಚು ಜನರಿಗೆ ಲಕ್ಷಾಂತರ ರುಪಾಯಿ ಹಣವನ್ನು ದುಬಾರಿ ಬಡ್ಡಿಗೆ ಸಾಲ ಕೊಟ್ಟಿದ್ದಾರೆ. ನಿಗದಿತ ಸಮಯದಲ್ಲಿ ಸಾಲ ಮರಳಿಸದ ಜನರಿಗೆ ದುಬಾರಿ ಬಡ್ಡಿ ವಿಧಿಸಿ ವಸೂಲಿ ಮಾಡುತ್ತಿದ್ದರು. ಬಡ್ಡಿ ನೀಡದ ಜನರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಣ ವಸೂಲಿ ಮಾಡುವುದು ಆರೋಪಿಗಳು ಚಾಳಿಯಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಲೆಮರೆಸಿಕೊಂಡ ಆರೋಪಿಗಳು

ಅಕ್ರಮ ಬಡ್ಡಿ ಬಗ್ಗೆ ಸಹಕಾರ ಇಲಾಖೆ ನೀಡಿದ ದೂರಿನ ಮೇರೆಗೆ ಮಾ.28ರಂದು ಶಾಮಣ್ಣ ಗಾರ್ಡನ್‌ನಲ್ಲಿ ಇರುವ ಶ್ರೀರಾಮನ ಮನೆ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಈ ವೇಳೆ ಶ್ರೀರಾಮ ಹಾಗೂ ಆತನ ಇಬ್ಬರು ಮಕ್ಕಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್‌ ಜಾರಿಗೊಳಿಸಿತ್ತು. ಆದರೆ ಇದುವರೆಗೆ ವಿಚಾರಣೆ ಹಾಜರಾಗದೆ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಅಧಿಕ 

ಬಡ್ಡಿಯ ಆಸೆ ತೋರಿಸಿ ವಂಚಿಸಿದ್ದವರ ಮಾಹಿತಿ ನೀಡಿ

ಬೆಂಗಳೂರು: ಅಧಿಕ ಬಡ್ಡಿ ಆಸೆ ತೋರಿಸಿ ನೂರಾರು ಜನರಿಗೆ ವಂಚಿಸಿ ಪರಾರಿ ಆಗಿರುವ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲಿಕ ಹಾಗೂ ವ್ಯವಸ್ಥಾಪಕ ನಿರ್ದೇಶಕನ ಕುರಿತು ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಸಿಸಿಬಿ ಪೊಲೀಸರು ಮನವಿ ಮಾಡಿದ್ದಾರೆ.

ವಿಜಯನಗರದ ಎಂಸಿ ಲೇಔಟ್‌ 5ನೇ ಅಡ್ಡರಸ್ತೆಯ ಅಕ್ಷಯ್ ಫಾರ್ಚೂನ್‌ ಡೆಲವಪರ್ಸ್‌ ಸಂಸ್ಥೆಯ ಮಾಲಿಕ ಜಿ.ಮುನಿರಾಜು ಹಾಗೂ ವ್ಯವಸ್ಥಾಪಕ ಮಂಜು ನಾಪತ್ತೆಯಾಗಿದ್ದು, ಆರೋಪಿಗಳ ಪತ್ತೆಗೆ ಸಿಸಿಬಿ ಹುಡುಕಾಟ ನಡೆಸಿದೆ. ತಮ್ಮ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೆ ಶೇ.25ರಷ್ಟು ಲಾಭಾಂಶ ಕೊಡುವುದಾಗಿ ನಂಬಿಸಿ ಜನರಿಗೆ ಆರೋಪಿಗಳು ವಂಚಿಸಿದ್ದಾರೆ. ಈ ಬಗ್ಗೆ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸಿಸಿಬಿ ತನಿಖೆ ನಡೆಸುತ್ತಿದೆ ಎಂದು ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ. ಈ ಆರೋಪಿಗಳ ಕುರಿತು ಮಾಹಿತಿ ಇದ್ದರೆ ಜಂಟಿ ಆಯುಕ್ತರು 94808 01011, ಸಿಸಿಬಿ ಡಿಸಿಪಿ2 94808 01021 ಹಾಗೂ 94808 01029 ಗೆ ಕರೆ ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.ಮುನಿರಾಜು ವಿರುದ್ಧ ದೂರುಗಳುಈ ಹಿಂದೆ ಕೂಡಾ ಇದೇ ರೀತಿ ಅಧಿಕ ಲಾಭಾಂಶದ ಆಸೆ ತೋರಿಸಿ ಜನರಿಗೆ ವಂಚಿಸಿರುವ ಬಗ್ಗೆ ಮುನಿರಾಜು ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಈಗ ಮತ್ತೆ ಆತ ವಂಚನೆ ಕೃತ್ಯ ಮುಂದುವರೆಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.