ಸಾರಾಂಶ
30ಕ್ಕೂ ಹೆಚ್ಚು ರೌಡಿ ಶೀಟರ್‌ಗಳ ಮನೆಗಳ ಮೇಲೆ ಸ್ಥಳೀಯ ಸಿಪಿಐ ಗೋಪಾಲ ರಾಠೋಡ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಗೋಕಾಕ
ನಗರ ಹಾಗೂ ತಾಲೂಕಿನ ವಿವಿಧೆಡೆ ಗುರುವಾರ ಬೆಳಗ್ಗೆ ರೌಡಿ ಶೀಟರ್‌ಗಳ ಮನೆ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿ, ಮನೆಯಲ್ಲಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.ಐಜಿಪಿ ಕಾಸಕುಮಾರ ಮಾರ್ಗದರ್ಶನದಲ್ಲಿ ಗೋಕಾಕ ನಗರ ಹಾಗೂ ತಾಲೂಕಿನಲ್ಲಿ ಸುಮಾರು 30ಕ್ಕೂ ಹೆಚ್ಚು ರೌಡಿ ಶೀಟರ್‌ಗಳ ಮನೆಗಳ ಮೇಲೆ ಸ್ಥಳೀಯ ಸಿಪಿಐ ಗೋಪಾಲ ರಾಠೋಡ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಾರ್ವಜನಿಕರಿಗೆ ಬೆದರಿಕೆಯೊಡ್ಡುತ್ತಿದ್ದ, ಅಸಭ್ಯ ವರ್ತನೆ ತೋರಿದ, ಶಾಲಾ - ಕಾಲೇಜುಗಳ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದ ಸುಮಾರು 25ಕ್ಕೂ ಹೆಚ್ಚು ಪುಡಿರೌಡಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಭಾನುವಾರ ಇಲ್ಲಿಯ ಆದಿಜಾಂಬವ ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕ ಶಾನೂರ್ ಪ್ರಜೇರಿ ಎಂಬಾತನ ಹತ್ಯೆ ನಡೆದಿತ್ತು. ಮಂಗಳವಾರ ಮೃತ ಯುವಕನ ಮನೆಗೆ ಭೇಟಿ ನೀಡಿದ್ದ ಉತ್ತರ ವಲಯ ಐಜಿಪಿ ವಿಕಾಸಕುಮಾರ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮೃತನ ಕುಟುಂಬಸ್ಥರು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಮನವಿ ಮಾಡಿದ್ದರು.