ಸಿಸಿಬಿಗೆ ಪೊಲೀಸ್‌ ಠಾಣಾಧಿಕಾರಿ ಮಾನ್ಯತೆ

| Published : Jan 12 2024, 01:46 AM IST / Updated: Jan 12 2024, 11:39 AM IST

CCB

ಸಾರಾಂಶ

ಈವರೆಗೂ ಸಿಸಿಬಿಗೆ ಸಾರ್ವಜನಿಕರಿಂದ ನೇರವಾಗಿ ದೂರು ಸ್ವೀಕರಿಸಿ ಎಫ್‌ಐಆರ್‌ ದಾಖಲಿಸುವ ಅಧಿಕಾರ ಇರಲಿಲ್ಲ. ಆದರೀಗ ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿ) ರಾಜ್ಯ ಸರ್ಕಾರ ಪೊಲೀಸ್‌ ಠಾಣಾಧಿಕಾರಿ ಮಾನ್ಯತೆ ನೀಡಿದ್ದು, ಸಿಸಿಬಿಗೀಗ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವ ಸಂಪೂರ್ಣ ಅಧಿಕಾರ ದಕ್ಕಿದಂತಾಗಿದೆ.

ಮೋಹನ ಹಂಡ್ರಂಗಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರ ಪೊಲೀಸ್‌ ವಿಭಾಗದ ಪ್ರಮುಖ ತನಿಖಾ ಘಟಕವಾದ ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿ) ರಾಜ್ಯ ಸರ್ಕಾರ ಪೊಲೀಸ್‌ ಠಾಣಾಧಿಕಾರಿ ಮಾನ್ಯತೆ ನೀಡಿದೆ. ಈ ಮುಖಾಂತರ ಸಿಸಿಬಿಗೆ ವೃತ್ತಿಪರ ತನಿಖಾ ಸಂಸ್ಥೆಯ ಮಾದರಿಯಲ್ಲಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವ ಸಂಪೂರ್ಣ ಅಧಿಕಾರ ಸಿಕ್ಕಿದೆ.

ಇಷ್ಟು ದಿನ ಸಿಸಿಬಿಗೆ ಸಾರ್ವಜನಿಕರಿಂದ ನೇರವಾಗಿ ದೂರು ಸ್ವೀಕರಿಸಿ ಎಫ್‌ಐಆರ್‌ ದಾಖಲಿಸುವ ಅಧಿಕಾರ ಇರಲಿಲ್ಲ. ನಗರದ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗುವ ಪ್ರಮುಖ ಪ್ರಕರಣಗಳನ್ನು ತನಿಖೆ ನಡೆಸಲು ನಗರ ಪೊಲೀಸ್‌ ಆಯುಕ್ತರು ಸಿಸಿಬಿಗೆ ವರ್ಗಾಯಿಸುತ್ತಿದ್ದರು. ಬಳಿಕ ಸಿಸಿಬಿ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸುತ್ತಿದ್ದರು.

ನಗರ ಪೊಲೀಸ್‌ ವ್ಯಾಪ್ತಿಯಲ್ಲಿ ನಡೆಯುವ ವೇಶ್ಯಾವಾಟಿಕೆ, ಮಾದಕವಸ್ತು ಮಾರಾಟ ದಂಧೆ, ಕ್ರಿಕೆಟ್‌ ಬೆಟ್ಟಿಂಗ್‌, ಜೂಜು ಅಡ್ಡೆಗಳು, ಅಪರಾಧಕ್ಕೆ ಸಂಚು, ರೌಟಿ ಚಟುವಟಿಕೆಗಳ ಬಗ್ಗೆ ತಮ್ಮದೇ ಮೂಲಗಳ ಮುಖಾಂತರ ಮಾಹಿತಿ ಸಂಗ್ರಹಿಸಿ ಬಳಿಕ ದಾಳಿ ಮಾಡುತ್ತಿದ್ದ ಸಿಸಿಬಿ ಪೊಲೀಸರು, ಆರೋಪಿಗಳನ್ನು ಬಂಧಿಸುತ್ತಿದ್ದರು. 

ಬಳಿಕ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿ ಆರೋಪಿಗಳು ಹಾಗೂ ಜಪ್ತಿ ಮಾಲುಗಳನ್ನು ಸ್ಥಳೀಯ ಪೊಲೀಸರ ವಶಕ್ಕೆ ಒಪ್ಪಿಸುತ್ತಿದ್ದರು. ನಂತರ ಸ್ಥಳೀಯ ಪೊಲೀಸರೇ ತನಿಖೆ ನಡೆಸುತ್ತಿದ್ದರು. 

ಇದೀಗ ಸಿಸಿಬಿ ಘಟಕಕ್ಕೆ ಪೊಲೀಸ್‌ ಠಾಣಾಧಿಕಾರಿ ಮಾನ್ಯತೆ ನೀಡಿರುವುದರಿಂದ ಇನ್ನು ಮುಂದೆ ಸಿಸಿಬಿ ಪೊಲೀಸರೇ ನೇರವಾಗಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಬಹುದಾಗಿದೆ.

ಸಿಸಿಬಿಯಲ್ಲಿ ಏಳು ಸ್ಕ್ವಾಡ್‌ಗಳು: ಸಿಸಿಬಿ ಘಟಕಕ್ಕೆ ಹೆಚ್ಚುವರಿ ಪೊಲೀಸ್‌ ಆಯುಕ್ತರು(ಅಪರಾಧ) ಮುಖ್ಯಸ್ಥರಾಗಿರುತ್ತಾರೆ. ಇಬ್ಬರು ಡಿಸಿಪಿಗಳು ಇರುತ್ತಾರೆ. ಸಿಸಿಬಿ ಘಟಕದಲ್ಲಿ ಪ್ರಮುಖವಾಗಿ ಏಳು ಸ್ಕ್ವಾಡ್‌ಗಳು ಇವೆ. 

ವಿಶೇಷ ವಿಚಾರಣೆ, ಸಂಘಟಿತ ಅಪರಾಧ ದಳ ಪೂರ್ವ, ಸಂಘಟಿತ ಅಪರಾಧ ದಳ ಪಶ್ಚಿಮ, ಸೈಬರ್‌ ಅಪರಾಧ ದಳ, ಮಹಿಳಾ ಸಂರಕ್ಷಣಾ ದಳ, ಮಾದಕವಸ್ತು ನಿಗ್ರಹ ದಳ, ಆರ್ಥಿಕ ಅಪರಾಧಗಳ ದಳ ಆ ಏಳು ಸ್ಕ್ವಾಡ್‌ಗಳಾಗಿವೆ. ಪ್ರತಿ ಸ್ಕ್ವಾಡ್‌ಗೆ ಎಸಿಪಿ ದರ್ಜೆಯ ಅಧಿಕಾರಿ ಮುಖ್ಯಸ್ಥರಾಗಿದ್ದು, ಇನ್‌ಸ್ಪೆಕ್ಟರ್‌ಗಳು, ಸಬ್‌ ಇನ್‌ಸ್ಪೆಕ್ಟರ್‌ಗಳು, ಕಾನ್‌ಸ್ಟೇಬಲ್‌ಗಳು ಇರುತ್ತಾರೆ.

ಈ ಹಿಂದೆ ಸೈಬರ್‌ ಕ್ರೈಂ ಠಾಣೆ: ಈ ಹಿಂದೆ 2015ರಲ್ಲಿ ಸಿಸಿಬಿಗೆ ಪೊಲೀಸ್ ಠಾಣಾಧಿಕಾರಿ ಮಾನ್ಯತೆ ನೀಡಲಾಗಿತ್ತು. ಆದರೆ, ಆ ಸಮಯದಲ್ಲಿ ನಗರದಲ್ಲಿ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಅದನ್ನು ಸೈಬರ್‌ ಪೊಲೀಸ್‌ ಠಾಣೆಯಾಗಿ ಮಾರ್ಪಡಿಸಲಾಗಿತ್ತು. 

ಇದೀಗ ನಗರದಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಣ ಹಾಕುವ ಹಾಗೂ ಕೇಂದ್ರ ಸಿಬಿಐ ಮಾದರಿಯಲ್ಲಿ ಎಫ್‌ಐಆರ್‌ ದಾಖಲಿಸಿ ಸ್ವತಂತ್ರವಾಗಿ ತನಿಖೆ ನಡೆಸಲು ಸಿಸಿಬಿಗೆ ಪೊಲೀಸ್‌ ಠಾಣಾಧಿಕಾರಿ ಮಾನ್ಯತೆ ನೀಡಲಾಗಿದೆ.

ಸಿಸಿಬಿ ಕೇಂದ್ರ ಕಚೇರಿಯಲ್ಲಿ ಠಾಣೆ: ಪ್ರಸ್ತುತ ನಗರದ ಎನ್‌.ಟಿ.ಪೇಟೆಯ ಕಾಟನ್‌ ಪೇಟೆ ಮುಖ್ಯರಸ್ತೆಯಲ್ಲಿ ಸಿಸಿಬಿ ಕೇಂದ್ರ ಕಚೇರಿ ಇದೆ. ಈ ಕಚೇರಿಯ ಆವರಣದಲ್ಲೇ ಸಿಸಿಬಿ ಪೊಲೀಸ್‌ ಠಾಣೆ ಆರಂಭಿಸುವ ಸಾಧ್ಯತೆಯಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.