ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿವಿಧ ಪ್ರಕರಣಗಳಲ್ಲಿ ಪೊಲೀಸರು ಜಪ್ತಿ ಮಾಡುವ ವಸ್ತುಗಳನ್ನು ಸಮರ್ಪಕವಾಗಿ ನಿರ್ವಹಿಸುವ ಉದ್ದೇಶದಿಂದ ತಾಂತ್ರಿಕತೆಯ ನೆರವಿನಿಂದ ಆ ಜಪ್ತಿ ಮಾಲುಗಳ ಮೇಲೆ ಕ್ಯೂಆರ್ ಕೋಡ್ ಅಳವಡಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದ ವಸ್ತುಗಳು ಹಾಗೂ ದಾಖಲೆಗಳ ನಿರ್ವಹಣೆಯಲ್ಲಿ ಕೆಲ ಲೋಪದೋಷಗಳು ಕಂಡು ಬಂದಿದ್ದವು. ಇದನ್ನು ಸರಿಪಡಿಸುವ ಉದ್ದೇಶದಿಂದ ತಾಂತ್ರಿಕ ಪರಿಹಾರ ಕಂಡುಕೊಳ್ಳಲಾಗಿದೆ. ಈ ಜಪ್ತಿ ಮಾಲುಗಳ ಸಮಪರ್ಕ ನಿರ್ವಹಣೆ ಸಂಬಂಧ ಪ್ರತ್ಯೇಕ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಜಪ್ತಿ ಮಾಲಿನ ಮೇಲೆ ಕ್ಯೂಆರ್ ಕೋಡ್ ಅಳವಡಿಸಲಾಗುತ್ತಿದೆ ಎಂದರು.
ಸ್ಕ್ಯಾನ್ ಮಾಡಿದರೆ ಪೂರ್ಣ ವಿವರ ಲಭ್ಯ:ಅಂದರೆ, ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಪ್ರಕರಣ, ವಸ್ತು, ಜಪ್ತಿ ಸ್ಥಳ, ಜಪ್ತಿ ಮಾಡಿದ ವ್ಯಕ್ತಿ, ಪಂಚ ಮಾಹಿತಿ ಸೇರಿದಂತೆ ಇಡೀ ಪ್ರಕರಣದ ವಿವರಗಳು ಒಂದೇ ಕಡೆ ಸಿಗಲಿದೆ. ಸದ್ಯಕ್ಕೆ ನಗರದ ಎಲ್ಲಾ ಪೊಲೀಸ್ ಠಾಣೆಗಳು ಹಾಗೂ ಸಿಸಿಬಿಯ ಎಲ್ಲಾ ವಿಭಾಗಗಳಲ್ಲಿ ಈ ಕ್ಯೂಆರ್ ಕೋಡ್ ಪರಿಚಯಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನ್ಯಾಯಾಲಯದಲ್ಲಿ ಸಮಸ್ಯೆ ತಪ್ಪಲಿದೆ:ಕೆಲ ಸಂದರ್ಭಗಳಲ್ಲಿ ಈ ಜಪ್ತಿ ಮಾಲುಗಳು ಚಲ್ಲಾಪಿಲ್ಲಿ ಆಗುವುದರಿಂದ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಗ ವೇಳೆ ಸಮಸ್ಯೆಯಾಗುತ್ತದೆ. ಅಂದರೆ, ಸರಿಯಾದ ಸಮಯಕ್ಕೆ ಆ ವಸ್ತುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಆಗುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಕ್ಯೂಆರ್ ಕೋಡ್ ಪರಿಚಯಿಸಲಾಗಿದೆ. ಈ ಹಿಂದೆ ಕೆಲ ಪ್ರಕರಣಗಳಲ್ಲಿ ನಾಪತ್ತೆಯಾಗಿದ್ದ ಜಪ್ತಿ ಮಾಲುಗಳನ್ನು ಹುಡುಕಿ ಪರಿಷ್ಕರಿಸಲಾಗಿದೆ ಎಂದರು.