ಮಕ್ಕಳನ್ನು ಕಳ್ಳ ಸಾಗಾಣಿಕೆ ಮಾಡುವ ಹೆಸರಿನಲ್ಲಿ ಪ್ರಾಂಶುಪಾಲೆ ಡಿಜಿಟಲ್ ಅರೆಸ್ಟ್‌: ₹24 ಲಕ್ಷ ಸುಲಿದ ವಂಚಕರು

| Published : Dec 12 2024, 01:45 AM IST / Updated: Dec 12 2024, 04:42 AM IST

digital arrest case
ಮಕ್ಕಳನ್ನು ಕಳ್ಳ ಸಾಗಾಣಿಕೆ ಮಾಡುವ ಹೆಸರಿನಲ್ಲಿ ಪ್ರಾಂಶುಪಾಲೆ ಡಿಜಿಟಲ್ ಅರೆಸ್ಟ್‌: ₹24 ಲಕ್ಷ ಸುಲಿದ ವಂಚಕರು
Share this Article
  • FB
  • TW
  • Linkdin
  • Email

ಸಾರಾಂಶ

ವಿದೇಶಕ್ಕೆ ಅಕ್ರಮವಾಗಿ 180 ಮಕ್ಕಳನ್ನು ಕಳ್ಳ ಸಾಗಾಣಿಕೆ ಮಾಡುವ ಹೆಸರಿನಲ್ಲಿ ನಗರದ ಪ್ರತಿಷ್ಠಿತ ಕಾಲೇಜಿನ ಮಹಿಳಾ ಪ್ರಾಂಶುಪಾಲರವೊಬ್ಬರನ್ನು ‘ಡಿಜಿಟಲ್ ಅರೆಸ್ಟ್‌’ ಮಾಡಿ ಸೈಬರ್ ವಂಚಕರು 24.32 ಲಕ್ಷ ರು. ಸುಲಿಗೆ ಮಾಡಿದ್ದಾರೆ.

 ಬೆಂಗಳೂರು : ವಿದೇಶಕ್ಕೆ ಅಕ್ರಮವಾಗಿ 180 ಮಕ್ಕಳನ್ನು ಕಳ್ಳ ಸಾಗಾಣಿಕೆ ಮಾಡುವ ಹೆಸರಿನಲ್ಲಿ ನಗರದ ಪ್ರತಿಷ್ಠಿತ ಕಾಲೇಜಿನ ಮಹಿಳಾ ಪ್ರಾಂಶುಪಾಲರವೊಬ್ಬರನ್ನು ‘ಡಿಜಿಟಲ್ ಅರೆಸ್ಟ್‌’ ಮಾಡಿ ಸೈಬರ್ ವಂಚಕರು 24.32 ಲಕ್ಷ ರು. ಸುಲಿಗೆ ಮಾಡಿದ್ದಾರೆ.

ಹಳೇ ವಿಮಾನ ನಿಲ್ದಾಣ ರಸ್ತೆ ವಿಮಾನಪುರ ಸಮೀಪ ಕಾಲೇಜಿನ ಪ್ರಾಂಶುಪಾಲೆ ಮೋಸ ಹೋಗಿದ್ದು, ಈ ಬಗ್ಗೆ ವೈಟ್‌ ಫೀಲ್ಡ್ ವಿಭಾಗದ ಸಿಇಎನ್‌ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇತ್ತೀಚಿಗೆ ಸಿಬಿಐ ಅಧಿಕಾರಿ ಅಶೀಶ್ ಶರ್ಮಾ ಹೆಸರಿನಲ್ಲಿ ಪ್ರಾಂಶುಪಾಲೆಗೆ ಬೆದರಿಸಿ ಕಿಡಿಗೇಡಿಗಳು ಹಣ ವಸೂಲಿ ಮಾಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಘಟನೆ ವಿವರ: ನ.22ರಂದು ಪ್ರಾಂಶುಪಾಲೆ ಮೊಬೈಲ್‌ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ತನ್ನನ್ನು ಸಿಬಿಐ ಅಧಿಕಾರಿ ಅಶೀಶ್ ಶರ್ಮಾ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ನಿಮ್ಮ ಮೊಬೈಲ್ ನಂಬರ್ ಅನ್ನು ಬಳಸಿ ಮಾನವ ಕಳ್ಳಸಾಗಾಣಿಕೆ ಮತ್ತು ಅಕ್ರಮ ಹಣ ಸಾಗಾಣಿಕೆ ನಡೆಯುತ್ತಿದೆ. ಈಗಾಗಲೇ ನಿಮ್ಮ ಹೆಸರಿನಲ್ಲಿ ಸಿಂಗಾಪುರಕ್ಕೆ 16 ಪಾಸ್‌ಪೋರ್ಟ್‌ಗಳು, 58 ಎಟಿಎಂ ಕಾರ್ಡ್‌ಗಳು ಹಾಗೂ 140 ಗ್ರಾಂ ಡ್ರಗ್ಸ್ ಕಳುಹಿಸಲು ಯತ್ನಿಸಿದ್ದ ಪಾರ್ಸೆಲ್ ಪತ್ತೆಯಾಗಿದೆ. ಅಲ್ಲದೆ 180 ಮಕ್ಕಳು ಸಿಂಗಾಪುರದಲ್ಲಿ ಸಿಲುಕಿರುವ ವರದಿ ಬಂದಿದೆ ಎಂದಿದ್ದಾನೆ. ಈ ಮಾತು ಕೇಳಿ ಪ್ರಾಂಶುಪಾಲೆ ಆತಂಕಗೊಂಡಿದ್ದಾರೆ.

ಹೀಗಾಗಿ ಈ ಅಕ್ರಮ ಮಕ್ಕಳ ಸಾಗಾಣಿಕೆ ಆರೋಪದಡಿ ನಿಮ್ಮ ವಿರುದ್ಧ ದೂರು ಸಲ್ಲಿಕೆಯಾಗಿದೆ. ಈ ಬಗ್ಗೆ ಎಫ್‌ಐಆರ್ ದಾಖಲಿಸುವ ಮುನ್ನ ನಿಮಗೆ ಕರೆ ಮಾಡಿದ್ದೇನೆ ಎಂದು ಹೇಳಿದ ಅಪರಿಚಿತ, ನಿಮಗೆ ಸಹಾಯ ಮಾಡುತ್ತೇವೆ ಎಂದು ಅಭಯ ನೀಡಿದ್ದಾನೆ. ಈ ಬಗ್ಗೆ ನಿಮ್ಮೊಂದಿಗೆ ದೆಹಲಿ ಪೊಲೀಸರು ಮಾತನಾಡಲಿದ್ದಾರೆ ಎಂದು ಹೇಳಿ ಆತ ಕರೆ ಸ್ಥಗಿತಗೊಳಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ದೆಹಲಿ ಪೊಲೀಸರ ನಕಲಿ ದಾಖಲೆ: ಕೆಲವೇ ನಿಮಿಷದಲ್ಲೇ ಸಂತ್ರಸ್ತೆಯ ವಾಟ್ಸ್ ಆ್ಯಪ್‌ಗೆ ದೆಹಲಿ ಪೊಲೀಸರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಕಳುಹಿಸಿದ ಮತ್ತೊಬ್ಬ ಅಪರಿಚಿತ, ಈ ಪ್ರಕರಣದ ಕುರಿತು ವಿಚಾರಣೆಗೆ ಬರುವಂತೆ ಸೂಚಿಸಿದ್ದಾನೆ. ಹಾಗೆಯೇ ಅಕ್ರಮ ಹಣ ಸಾಗಾಣಿಕೆ ಆರೋಪ ಸಂಬಂಧ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಬೇಕಿದೆ ಎಂದು ಆತ ಬ್ಯಾಂಕ್ ವಿವರ ಕಲೆ ಹಾಕಿದ್ದಾನೆ. ಈ ಕೂಡಲೇ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಸರ್ಕಾರದ ಖಾತೆಗೆ ವರ್ಗಾವಣೆ ಮಾಡಬೇಕು. ತನಿಖೆ ಮುಗಿದ ನಂತರ ಆ ಹಣವು ಕೂಡಲೇ ನಿಮಗೆ ಮರಳಿಸುತ್ತೇವೆ ಎಂದು ಆರೋಪಿ ಹೇಳಿದ್ದಾನೆ. ಅಂತೆಯೇ ಆರೋಪಿ ಹೇಳಿದ ಬ್ಯಾಂಕ್‌ ಖಾತೆಗೆ 24.36 ಲಕ್ಷ ರು. ಹಣವನ್ನು ಪ್ರಾಂಶುಪಾಲೆ ಆರ್‌ಟಿಜಿಎಸ್‌ ಮಾಡಿದ್ದಾರೆ. ಈ ಹಣ ವರ್ಗಾವಣೆ ಬಳಿಕ ಕರೆ ಸ್ಥಗಿತವಾಗಿದೆ. ಕೊನೆಗೆ ತಾವು ಮೋಸ ಹೋಗಿರುವ ಸಂಗತಿ ಅರಿವಿಗೆ ಬಂದು ಸೈಬರ್ ಪೊಲೀಸರಿಗೆ ಅವರು ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.