ಆಸ್ತಿ ವಿವಾದ: ಚಾಕುವಿನಿಂದ ಇರಿದು ಜೋಡಿ ಕೊಲೆ ಮಾಡಿದ ಸಂಬಂಧಿ!

| Published : Feb 08 2024, 01:31 AM IST

ಸಾರಾಂಶ

ಆಸ್ತಿ ವಿಚಾರವಾಗಿ ಚಾಕುವಿನಿಂದ ಇರಿದು ತನ್ನ ಇಬ್ಬರು ಸೋದರ ಸಂಬಂಧಿಕರನ್ನು ವ್ಯಕ್ತಿಯೊಬ್ಬ ಕೊಂದಿರುವ ಘಟನೆ ನಗರದ ಜನ ನಿಬಿಢ ಪ್ರದೇಶವಾದ ಕುಂಬಾರಪೇಟೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಸ್ತಿ ವಿಚಾರವಾಗಿ ಚಾಕುವಿನಿಂದ ಇರಿದು ತನ್ನ ಇಬ್ಬರು ಸೋದರ ಸಂಬಂಧಿಕರನ್ನು ವ್ಯಕ್ತಿಯೊಬ್ಬ ಕೊಂದಿರುವ ಘಟನೆ ನಗರದ ಜನ ನಿಬಿಢ ಪ್ರದೇಶವಾದ ಕುಂಬಾರಪೇಟೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಪದ್ಮನಾಭನಗರದ ನಿವಾಸಿ ಸುರೇಶ್ (58) ಹಾಗೂ ಮಹೇಂದ್ರ (60) ಮೃತ ದುರ್ದೈವಿಗಳು. ಈ ಕೃತ್ಯ ಸಂಬಂಧ ಮೃತರ ಸೋದರ ಸಂಬಂಧಿ ಕೋರಮಂಗಲದ ಭದ್ರ ಪ್ರಸಾದ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಂಬಾರಪೇಟೆಯ ತಮ್ಮ ಮಾರ್ಕೆಟಿಂಗ್ ಕಂಪನಿಯ ಕಚೇರಿಯಲ್ಲಿ ಸುರೇಶ್ ಹಾಗೂ ಮಹೇಂದ್ರ ಇದ್ದಾಗ ರಾತ್ರಿ 8.30ರ ಸುಮಾರಿಗೆ ಈ ಹತ್ಯೆ ನಡೆದಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್‌.ಎಚ್‌.ಟೆಕ್ಕಣ್ಣನವರ್‌ ಹೇಳಿದ್ದಾರೆ.

ಕುಂಬಾರಪೇಟೆ ಕಟ್ಟಡ ವಿವಾದ?:

ಅಡುಗೆ ಪರಿಕರಗಳ ಸಗಟು ವ್ಯಾಪಾರಿಗಳಾದ ಸುರೇಶ್ ಹಾಗೂ ಮಹೇಂದ್ರ, ಕುಂಬಾರಪೇಟೆಯಲ್ಲಿ ‘ಹರಿ ಮಾರ್ಕೆಟಿಂಗ್‌’ ಹೆಸರಿನ ಕಚೇರಿ ತೆರೆದಿದ್ದರು. ಆದರೆ ಹಲವು ದಿನಗಳಿಂದ ಕುಂಬಾರಪೇಟೆಯ ಕಟ್ಟಡವೊಂದರ ಮಾಲಿಕತ್ವದ ವಿಚಾರವಾಗಿ ಸೋದರ ಸಂಬಂಧಿಗಳಾದ ಸುರೇಶ್‌ ಮತ್ತು ಮಹೇಂದ್ರ ಜತೆ ಆರೋಪಿ ಭದ್ರನಿಗೆ ಮನಸ್ತಾಪವಾಗಿತ್ತು. ಇದೇ ವಿಷಯವಾಗಿ ಆಗಾಗ್ಗೆ ಈ ಮೂವರ ಮಧ್ಯೆ ಕಲಹಗಳು ಸಹ ನಡೆದಿದ್ದವು ಎಂದು ತಿಳಿದು ಬಂದಿದೆ.

ಈ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೆರಳಿದ ಭದ್ರ, ತನ್ನ ಸೋದರ ಸಂಬಂಧಿಕರ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದ. ಅಂತೆಯೇ ಬುಧವಾರ ರಾತ್ರಿ ಕುಂಬಾರಪೇಟೆಯ ಕಚೇರಿಯಲ್ಲಿ ಸುರೇಶ್ ಹಾಗೂ ಮಹೇಂದ್ರ ಇರುವ ಬಗ್ಗೆ ಖಚಿತ ಮಾಹಿತಿ ಪಡೆದು ಆತ ದಾಳಿ ನಡೆಸಿದ್ದಾನೆ. ಈ ವೇಳೆ ಕುರ್ಚಿಯಲ್ಲಿ ಕುಳಿತಿದ್ದ ಸುರೇಶ್‌ಗೆ ಮೊದಲು ಚಾಕುವಿನಿಂದ ಎರಡ್ಮೂರು ಬಾರಿ ಇರಿದು ಭದ್ರ ಹತ್ಯೆಗೈದಿದ್ದಾನೆ ಎಂದು ಮೂಲಗಳು ಹೇಳಿವೆ. ತಳ್ಳುವ ಗಾಡಿ ಮೇಲೆ ಬಿದ್ದರೂ ಬಿಡದೆ ಹತ್ಯೆ

ಸುರೇಶ್ ಮೇಲೆ ಭದ್ರ ಎರಗಿದ ಕೂಡಲೇ ಭೀತಿಗೊಂಡು ಕಚೇರಿಯಿಂದ ಪ್ರಾಣ ಉಳಿಸಿಕೊಳ್ಳಲು ಮಹೇಂದ್ರ ಹೊರ ಬಂದಿದ್ದಾರೆ. ಆದರೆ ಅವರನ್ನು ಬೆನ್ನತ್ತಿ ಆರೋಪಿ ದಾಳಿ ನಡೆಸಿದ್ದಾನೆ. ರಸ್ತೆ ಬದಿಯ ತಳ್ಳುವ ಗಾಡಿ ಮೇಲೆ ಬಿದ್ದರೂ ಬಿಡದೆ ಮಹೇಂದ್ರನಿಗೆ ಚಾಕುವಿನಿಂದ ಭದ್ರ ಇರಿದು ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂಬಾರಪೇಟೆಯ ಅವಳಿ ಕೊಲೆ ಕೃತ್ಯಕ್ಕೆ ಆಸ್ತಿ ವಿವಾದ ಕಾರಣ ಎಂಬುದು ಪ್ರಾಥಮಿಕ ಹಂತದ ತನಿಖೆಯಲ್ಲಿ ಗೊತ್ತಾಗಿದೆ. ಹತ್ಯೆ ನಡೆದ ಕೆಲವೇ ಕ್ಷಣಗಳಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

\I-ಶೇಖರ್‌.ಎಚ್‌.ಟೆಕ್ಕಣ್ಣನವರ್‌, ಡಿಸಿಪಿ, ಕೇಂದ್ರ ವಿಭಾಗ.\I