ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ ಮಾಡಿರುವ ಯಲಹಂಕ ಉಪನಗರ ಠಾಣೆ ಪೊಲೀಸರು ಓರ್ವನ ಬಂಧಿಸಿ, ವಿದೇಶಿ ಮೂಲದ ಏಳು ಮಂದಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಯಲಹಂಕ ಉಪನಗರದ ಬಿ ಸೆಕ್ಟರ್‌ನ ರೋರಾ ಲಕ್ಸುರಿ ಥಾಯಿ ಹೆಸರಿನ ಸ್ಪಾದ ಮ್ಯಾನೇಜರ್ ಕಿಶೋರ್ ಎಂಬಾತನನ್ನು ಬಂಧಿಸಲಾಗಿದೆ. ಸ್ಪಾದ ಮಾಲೀಕ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.
ಸ್ಪಾದಲ್ಲಿ ಅನಧಿಕೃತವಾಗಿ ವಿದೇಶಿ ಮಹಿಳೆಯರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಏಳು ಮಹಿಳೆಯರನ್ನು ರಕ್ಷಿಸಲಾಗಿದೆ.
ಆರೋಪಿಗಳು ಥೈಲ್ಯಾಂಡ್ ಮೂಲದ ಮಹಿಳೆಯರನ್ನು ಪ್ರವಾಸಿ ವೀಸಾ, ಬಿಜಿನೆಸ್ ವೀಸಾದಡಿ ನಗರಕ್ಕೆ ಕರೆತಂದು ಹಣದಾಸೆ ತೋರಿಸಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿದ್ದರು.
ಸ್ಪಾದಲ್ಲಿ ಬಾಡಿ ಮಸಾಜ್, ಕ್ರಾಸ್ ಮಸಾಜ್, ಹ್ಯಾಪಿ ಎಂಡಿಂಗ್, ಬಾಡಿ ಟೂ ಬಾಡಿ ಮಸಾಜ್ ಸೇವೆಯ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಸಂಬಂಧ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.