ಸಾರಾಂಶ
ಬೆಂಗಳೂರು : ನ್ಯಾಯ ಕೇಳಲು ಹೋಗಿದ್ದ ರಾಷ್ಟ್ರ ರಕ್ಷಣೆ ಪಡೆ ಮುಖಂಡ ಪುನೀತ್ ಕೆರೆಹಳ್ಳಿಯ ಮೇಲೆಯೇ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಬಸವೇಶ್ವರನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಇದರಿಂದ ಕೆಲ ಕಾಲ ಠಾಣೆ ಬಳಿ ಹೈಡ್ರಾಮಾವೇ ನಡೆಯಿತು.
ಪೊಲೀಸರ ದೌರ್ಜನ್ಯಕ್ಕೆ ಧಿಕ್ಕಾರ, ಎಸಿಪಿ ಚಂದನ್ ಕುಮಾರ್‌ಗೆ ಧಿಕ್ಕಾರ, ಬೇಕೇ ಬೇಕು, ನ್ಯಾಯಬೇಕು ಎಂದು ಪ್ರತಿಭಟನಾನಿರತ ಕಾರ್ಯಕರ್ತರು ಪೊಲೀಸರ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಅನುಮತಿ ಇಲ್ಲದೆ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು, ಕೆಲವು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಕೆಲ ಕಾಲ ತಳ್ಳಾಟ ನೂಕಾಟ ನಡೆಯಿತು.
ಇದೇ ಸಮಯಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಹರೀಶ್ ಪೂಂಜಾ, ಪುನೀತ್ ಕೆರೆಹಳ್ಳಿ ಅವರನ್ನು ಠಾಣೆ ಬಳಿ ಕರೆದುಕೊಂಡು ಬಂದರು. ಈ ವೇಳೆ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿತು. ಈ ವೇಳೆ ಪೊಲೀಸರು ಪುನೀತ್ ಕೆರೆಹಳ್ಳಿ ಸೇರಿ ಮತ್ತಷ್ಟು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ವೇಳೆ ಪುನೀತ್ ಕೆರೆಹಳ್ಳಿ ಅವರನ್ನು ಬಿಡುಗಡೆ ಮಾಡುವವರೆಗೂ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದರು. ಕೆಲ ಹೊತ್ತಿನ ಬಳಿಕ ಪೊಲೀಸರು ಪುನೀತ್ ಕೆರೆಹಳ್ಳಿ ಹಾಗೂ ಕೆಲ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿದರು.
ಡಿಸಿಪಿಗೆ ಮನವಿ:
ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಠಾಣೆ ಬಳಿ ಬಂದ ಡಿಸಿಪಿ ಶೇಖರ್ ಅವರನ್ನು ಭೇಟಿ ಮಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಹರೀಶ್ ಪೂಂಜಾ ಕೆಲ ವಿಚಾರಗಳ ಬಗ್ಗೆ ಚರ್ಚಿಸಿದರು. ಪುನೀತ್ ಕೆರೆಹಳ್ಳಿ ಮೇಲೆ ದೌರ್ಜನ್ಯ ಎಸೆಗಿರುವ ಎಸಿಪಿ ಚಂದನ್ ವಿರುದ್ಧ ಕ್ರಮಕ್ಕೆ ಮನವಿ ಮಾಡಿದರು. ಅಂತೆಯೇ ಅಕ್ರಮ ಮಾಂಸ ಸಾಗಣೆ ಆರೋಪದಡಿ ಅಬ್ದುಲ್ ರಜಾಕ್‌ನನ್ನು ಬಂಧಿಸುವಂತೆ ಕೋರಿದರು.
ಇಲಾಖೆಯಲ್ಲಿ ಸಲಿಂಗ ಕಾಮಿಗಳು ಇದ್ದಾರಾ?
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಸಾರ್ವಜನಿಕ ಹಿತದೃಷ್ಟಿಯಿಂದ ಪುನೀತ್ ಕೆರೆಹಳ್ಳಿ ಅವರು ಅಂದು ರೈಲು ನಿಲ್ದಾಣದಲ್ಲಿ ಮಾಂಸದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ, ಪೊಲೀಸರು ಅವರನ್ನೇ ಬಂಧಿಸಿ ಠಾಣೆಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ. ಬಟ್ಟೆ ಬಿಚ್ಚಿಸಿ ನಗ್ನಗೊಳಿಸಿದ್ದಾರೆ. ಕಾನೂನಿನಲ್ಲಿ ಪೊಲೀಸರು ಬಟ್ಟೆ ಬಚ್ಚಿಸಲು ಅವಕಾಶವಿದೆಯೇ? ಪೊಲೀಸ್ ಇಲಾಖೆಯಲ್ಲಿ ಸಲಿಂಗ ಕಾಮಿಗಳು ಇದ್ದಾರಾ? ಎಸಿಪಿ ಚಂದನ್ ಏಕೆ ಪುನೀತ್‌ನ ಬಟ್ಟೆ ಬಚ್ಚಿಸಿದರು ಎಂದು ಪ್ರಶ್ನಿಸಿದರು.
ರಜಾಕ್ ವಿರುದ್ಧ ಎಫ್‌ಐಆರ್‌ಗೆ ಆಗ್ರಹ:
ಅಂದು ರೈಲು ನಿಲ್ದಾಣದಲ್ಲಿ ಗೂಂಡಾ ರೀತಿ ವರ್ತಿಸಿದ ಅಬ್ದುಲ್ ರಜಾಕ್ ವಿರುದ್ಧ ಏಕೆ ಎಫ್‌ಐಆರ್ ದಾಖಲಿಸಿಲ್ಲ. ಏಕೆ ಆತನನ್ನು ಬಂಧಿಸಿಲ್ಲ ಎಂದು ಪ್ರಶ್ನೆ ಮಾಡಿದ್ದೇವೆ. ಕೂಡಲೇ ಆತನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ಪುನೀತ್ ಕೆರೆಹಳ್ಳಿ ಅವರನ್ನು ನಗ್ನಗೊಳಿಸಿ ಹಲ್ಲೆ ಮಾಡಿರುವ ಎಸಿಪಿ ಚಂದನ್ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಡಿಸಿಪಿ ಬಳಿ ಆಗ್ರಹಿಸಿದ್ದೇವೆ ಎಂದರು.
ಪೊಲೀಸ್ ಇಲಾಖೆ ಒಳ್ಲೆಯ ಕೆಲಸಗಳನ್ನೂ ಮಾಡುತ್ತಿದೆ. ಆದರೆ, ಎಸಿಪಿ ಚಂದನ್ ರೀತಿಯವರು ಹೀರೋಯಿಸಂ ತೋರಿಸಲು ರೀತಿಯ ಅತಿರೇಕದ ವರ್ತನೆ ತೋರುತ್ತಿದ್ದಾರೆ. ಇವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಶಾಸಕ ಹರೀಶ್ ಪೂಂಜಾ ಮಾತನಾಡಿ, ನ್ಯಾಯ ಕೇಳಲು ಹೋಗಿದ್ದ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಗೂಂಡಾಗಳ ರೀತಿ ಬಳಸಿಕೊಳ್ಳುತ್ತಿದೆ. ಇದು ಸಿಎಂ ಸಿದ್ಧರಾಮಯ್ಯ ಅವರ ಹಿಂದೂ ವಿರೋಧಿ ಧೋರಣೆ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸಿಪಿ ಬಳಿ ಪೆನ್ ಡ್ರೈವ್!
ಅಂದು ರೈಲು ನಿಲ್ದಾಣದಲ್ಲಿ ಈ ಅಕ್ರಮ ಮಾಂಸ ದಂಧೆ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ ಎಂದು ಪೆನ್ ಡ್ರೈವ್ ತೋರಿಸಿದೆ. ಬಳಿಕ ಪೊಲೀಸರು ನನ್ನನ್ನು ವಶಕ್ಕೆ ಪಡೆದು ನೇರ ಕಾಟನ್‌ಪೇಟೆಗೆ ಠಾಣೆಗೆ ಕರೆದೊಯ್ದು ಕೋಣೆಗೆ ನೂಕಿದರು. ಕಾಲು ಸಮಸ್ಯೆ ಇದ್ದಿದ್ದರಿಂದ ನನಗೆ ಎದ್ದು ಓಡಾಡಲು ಆಗುತ್ತಿರಲಿಲ್ಲ. ವೇಳೆ ಠಾಣೆಗೆ ಬಂದ ಎಸಿಪಿ ಚಂದನ್, ಬಲವಂತವಾಗಿ ನನ್ನನ್ನು ಮೇಲೆ ಮೇಲೆ ಎಬ್ಬಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಲಾಠಿಯಿಂದ 8 ಏಟು ಹೊಡೆದರು. ಬಳಿಕ ಬಟ್ಟೆ ಬಿಚ್ಚಿಸಿ ನಗ್ನಗೊಳಿಸಿದರು. ಸುಮಾರು 30 ನಿಮಿಷ ಠಾಣೆಯಲ್ಲಿ ನಗ್ನನಾಗಿಯೇ ಇದ್ದೆ. ಬಳಿಕ ನಾನು ಅಸ್ವಸ್ಥನಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆ ಎಸಿಪಿ ಚಂದನ್ ನನ್ನ ಬಳಿ ಇದ್ದ ಪೆನ್‌ಡ್ರೈವ್ ಕಸಿದುಕೊಂಡರು. ಪೆನ್ ಡ್ರೈವ್‌ನಲ್ಲಿ ರಾಜಸ್ಥಾನದಿಂದ ನಗರಕ್ಕೆ ಅಕ್ರಮವಾಗಿ ಮಾಂಸ ಸಾಗಾಟ ಮಾಡುತ್ತಿರುವುದರ ಬಗ್ಗೆ ಸಾಕ್ಷ್ಯಗಳು ಇವೆ ಎಂದು ಪುನೀತ್ ಕೆರೆಹಳ್ಳಿ ಹೇಳಿದರು.
ಸಿಂಹ, ಕೆರೆಹಳ್ಳಿ ವಿರುದ್ಧ ಎಫ್‌ಐಆರ್
ಅನುಮತಿ ಇಲ್ಲದೆ ಬಸವೇಶ್ವರನಗರ ಪೊಲೀಸ್ ಠಾಣೆ ಬಳಿ ಗುಂಪು ಕಟ್ಟಿಕೊಂಡು ಪ್ರತಿಭಟನೆ ಮಾಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಮಾಜಿ ಸಂಸದ ಪ್ರತಾಪ್ ಸಿಂಹ, ಪುನೀತ್ ಕೆರೆಹಳ್ಳಿ ಹಾಗೂ ಇತರರ ವಿರುದ್ಧ ಬಸವೇಶ್ವರನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.