ಚಿನ್ನದ ವ್ಯಾಪಾರಿಗಳಿಗೆ ವಂಚಿಸಿದ ಐಶ್ವರ್ಯಗೌಡ ಸಿಡಿಆರ್‌ ಪ್ರಕರಣದಲ್ಲಿ ಪಿಎಸ್‌ಐ ಸಹಕಾರ

| N/A | Published : Feb 10 2025, 01:46 AM IST / Updated: Feb 10 2025, 04:27 AM IST

ಸಾರಾಂಶ

ಚಿನ್ನದ ವ್ಯಾಪಾರಿಗಳಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಐಶ್ವರ್ಯ ಗೌಡಗೆ ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಮೊಬೈಲ್ ದತ್ತಾಂಶ ಸಂಗ್ರಹ (ಸಿಡಿಆರ್‌) ಪಡೆಯಲು ಓರ್ವ ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್‌ ಸಹಕಾರ ನೀಡಿದ್ದಾರೆಂಬ ಮಾತುಗಳು ಕೇಳಿ ಬಂದಿವೆ.

 ಬೆಂಗಳೂರು : ಚಿನ್ನದ ವ್ಯಾಪಾರಿಗಳಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಐಶ್ವರ್ಯ ಗೌಡಗೆ ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಮೊಬೈಲ್ ದತ್ತಾಂಶ ಸಂಗ್ರಹ (ಸಿಡಿಆರ್‌) ಪಡೆಯಲು ಓರ್ವ ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್‌ ಸಹಕಾರ ನೀಡಿದ್ದಾರೆಂಬ ಮಾತುಗಳು ಕೇಳಿ ಬಂದಿವೆ.

ಈ ಕೃತ್ಯ ಬಯಲಾದ ಬೆನ್ನಲ್ಲೇ ಕೆಲ ಪೊಲೀಸರಿಗೆ ಬಂಧನ ಭೀತಿ ಶುರುವಾಗಿದ್ದು, ಇನ್ನೆರಡು ದಿನಗಳಲ್ಲಿ ಅಕ್ರಮ ಸಿಡಿಆರ್‌ ಪಡೆದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಬೆಂಗಳೂರು ನಗರ ಹಾಗೂ ಹೊರ ಜಿಲ್ಲೆಗಳಲ್ಲಿ ಆ ಇನ್ಸ್‌ಪೆಕ್ಟರ್ ಕಾರ್ಯನಿರ್ವಹಿಸಿದ್ದು, ಹಲವು ವರ್ಷಗಳಿಂದ ಐಶ್ವರ್ಯಗೌಡಳಿಗೆ ಅವರು ಚಿರಪಚಿತರು. ಅದೇ ರೀತಿ ಕೆಲ ಆಮಿಷಗಳಿಗೆ ಬಲಿಯಾಗಿ ಆರೋಪಿಗೆ ಪಿಎಸ್‌ಐಗಳು ಹಾಗೂ ಕಾನ್‌ಸ್ಟೇಬಲ್‌ಗಳು ಸಹಕಾರ ಕೊಟ್ಟಿದ್ದಾರೆ. ಈಗಾಗಲೇ ಈ ಪೊಲೀಸರ ಕುರಿತು ಪ್ರಾಥಮಿಕ ಹಂತದ ತನಿಖೆಯಲ್ಲಿ ತನಿಖಾ ತಂಡ ಮಾಹಿತಿ ಕಲೆ ಹಾಕಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರಿನಲ್ಲಿ ಚಿನ್ನದ ವ್ಯಾಪಾರಿಗಳಿಗೆ ವಂಚಿಸಿದ ಆರೋಪದ ಮೇರೆಗೆ ಐಶ್ವರ್ಯಗೌಡಳ ಬಂಧನ ಬಳಿಕ ಬಿಡುಗಡೆಯಾಗಿತ್ತು. ಈ ಪ್ರಕರಣದ ತನಿಖೆ ವೇಳೆ ಕಾನೂನುಬಾಹಿರವಾಗಿ ಆಕೆ ಸಿಡಿಆರ್‌ ಪಡೆದಿದ್ದ ಕೃತ್ಯ ಬಯಲಾಗಿದೆ.

ಅಧಿಕಾರಿಗಳ ಜತೆ ಎಸಿಪಿ ಚರ್ಚೆ:

ಸಿಡಿಆರ್ ಪ್ರಕರಣದಲ್ಲಿ ಪೊಲೀಸರ ಹೆಸರು ಪ್ರಸ್ತಾಪವಾದ ಬೆನ್ನಲ್ಲೇ ತನಿಖೆ ಕುರಿತು ಹಿರಿಯ ಅಧಿಕಾರಿಗಳ ಜತೆ ವಿಜಯನಗರ ಉಪ ವಿಭಾಗದ ಎಸಿಪಿ ಚಂದನ್ ಕುಮಾರ್ ಸಮಾಲೋಚಿಸಿದ್ದಾರೆ. ಈ ಕೃತ್ಯದ ದೂರುದಾರರಾಗಿರುವ ಬ್ಯಾಟರಾಯನಪುರ ಎಸಿಪಿ ಭರತ್ ರೆಡ್ಡಿ ಅವರಿಂದ ಸಹ ಪ್ರಾಥಮಿಕ ಹಂತದ ಮಾಹಿತಿಯನ್ನು ಎಸಿಸಿ ಚಂದನ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.