ಸಾರಾಂಶ
ನವದೆಹಲಿ: ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಇಬ್ಬರು ಅಮಾಯಕರ ಬಲಿಪಡೆದ ಪ್ರಕರಣದಲ್ಲಿ ಪುಣೆ ಬಾಲಕನ ರಕ್ಷಣೆಗೆ ಆತನ ತಾಯಿಯೇ ಮುಂದಾಗಿದ್ದ ವಿಷಯ ಬೆಳಕಿಗೆ ಬಂದಿದೆ.
ಬಾಲಕನ ಬಚಾವ್ ಮಾಡಲು ಆತನ ರಕ್ತದ ಮಾದರಿ ಬದಲಾಯಿಸಲಾಗಿತ್ತು ಎಂಬ ವಿಷಯ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಆದರೆ ಹೀಗೆ ಪುತ್ರನ ರಕ್ತನ ಮಾದರಿ ಬಾಟಲ್‌ನಲ್ಲಿ ಆತನ ತಾಯಿ ತನ್ನ ರಕ್ತವನ್ನು ಸೇರಿಸಿದ್ದರು. ಇದಕ್ಕಾಗಿ ವೈದ್ಯರು ಬಾಲಕನ ಕುಟುಂಬದಿಂದ 3 ಲಕ್ಷ ರು. ಲಂಚ ಸ್ವೀಕರಿಸಿದ್ದರು ಎಂದು ಪ್ರಕರಣ ಸಂಬಂಧ ಬಂಧಿತ ವೈದ್ಯ ಶ್ರೀಹರಿ ಹಾಲ್ನೋರ್ ತಪ್ಪೊಪ್ಪಿಕೊಂಡಿದ್ದಾರೆ. ಬಾಲಕ ಮದ್ಯ ಸೇವನೆ ಮಾಡಿಲ್ಲ ಎಂದು ಸಾಬೀತುಪಡಿಸಲು ಆತನ ರಕ್ತದ ಮಾದರಿಯನ್ನೇ ಬದಲಾಯಿಸಲಾಗಿತ್ತು.
ಆಪ್ರಾಪ್ತಗೆ ಜಾಮೀನು ಕೊಟ್ಟ ಜೆಜೆಬಿ ಅಧಿಕಾರಿ ಹೆಲ್ಮೆಟ್ ಇಲ್ಲದೇ ಬೈಕ್ ಸವಾರ
ಪುಣೆ: ಪೋರ್ಷೆ ಅಪಘಾತದಲ್ಲಿ ಅಪ್ರಾಪ್ತ ಬಾಲಕನಿಗೆ ರಸ್ತೆ ಅಪಘಾತದ ಕುರಿತು ಪ್ರಬಂಧ ಬರೆಯುವ ಷರತ್ತಿನ ಮೇಲೆ 15 ಗಂಟೆಗಳಲ್ಲೇ ಜಾಮೀನು ನೀಡಿ ಟೀಕೆಗೆ ಗುರಿಯಾಗಿದ್ದ ಬಾಲಾಪರಾಧ ನ್ಯಾಯಮಂಡಳಿಯ ಅಧಿಕಾರಿ ಎಲ್ ಎನ್ ದಾನವಾಡೆ ಅವರೇ ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ.
ಗುರುವಾರ ಅವರನ್ನು ಪ್ರಶ್ನಿಸಲು ಪತ್ರಕರ್ತರು ಜಮಾಯಿಸಿದಾಗ ದಾನವಾಡೆ ಪತ್ರಕರ್ತರನ್ನು ತಪ್ಪಿಸಿಕೊಳ್ಳುವ ಸಲುವಾಗಿ ಹೆಲ್ಮೆಟ್ ಇಲ್ಲದೇ ಬೈಕ್‌ನಲ್ಲಿ ಆತುರಾತುರವಾಗಿ ಹೊರಟರು. ಬಳಿಕ ಪತ್ರಕರ್ತರೊಬ್ಬರು ಕಾರ್‌ನಲ್ಲಿ ಅವರನ್ನು ಹಿಂಬಾಲಿಸಿ ಪ್ರಶ್ನಿಸಲು ಮುಂದಾದರೂ ಉತ್ತರಿಸದೆ ಮುಂದಕ್ಕೆ ತೆರಳಿದ ಪ್ರಸಂಗ ನಡೆದಿದೆ.