ಸಾರಾಂಶ
ಮಳವಳ್ಳಿ ತಾಲೂಕಿನ ಬೊಪ್ಪೇಗೌಡನಪುರ ಹೋಬಳಿಯ ಸರಗೂರು ಹ್ಯಾಂಡ್ ಪೋಸ್ಟ್ ಬಳಿ ಕೃಷಿ ಇಲಾಖೆ ಜಾಗೃತ ಕೋಶ ಹಾಗೂ ತಾಲೂಕು ಕೃಷಿ ಅಧಿಕಾರಿಗಳ ತಂಡ ದಾಳಿ ನಡೆಸಿ ಪ್ರತಿಷ್ಠಿತ ಕಂಪನಿಗಳ ಲೇಬಲ್ ಬಳಸಿ ಮಾರಾಟ ಮಾಡಲು ಯತ್ನಿಸಿದ ಅಪಾರ ಪ್ರಮಾಣ ನಕಲಿ ಕೀಟನಾಶಕ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಬೊಪ್ಪೇಗೌಡನಪುರ ಹೋಬಳಿಯ ಸರಗೂರು ಹ್ಯಾಂಡ್ ಪೋಸ್ಟ್ ಬಳಿ ಕೃಷಿ ಇಲಾಖೆ ಜಾಗೃತ ಕೋಶ ಹಾಗೂ ತಾಲೂಕು ಕೃಷಿ ಅಧಿಕಾರಿಗಳ ತಂಡ ದಾಳಿ ನಡೆಸಿ ಪ್ರತಿಷ್ಠಿತ ಕಂಪನಿಗಳ ಲೇಬಲ್ ಬಳಸಿ ಮಾರಾಟ ಮಾಡಲು ಯತ್ನಿಸಿದ ಅಪಾರ ಪ್ರಮಾಣ ನಕಲಿ ಕೀಟನಾಶಕಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಹ್ಯಾಂಡ್ ಪೋಸ್ಟ್ ಬಳಿಯ ಶ್ರೀಭೈರವೇಶ್ವರ ಅಗ್ರೋಟೆಕ್ ಕೀಟನಾಶಕ ಮಾರಾಟ ಅಂಗಡಿಯಲ್ಲಿ ಕಳಪೆ ಗುಣಮಟ್ಟದ ಕೀಟನಾಶಕಗಳ ಮಾರಾಟದ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೃಷಿ ಇಲಾಖೆಯ ಜಾಗೃತ ಕೋಶದ ಹೆಚ್ಚುವರಿ ನಿರ್ದೇಶಕ ದೇವರಾಜು ಹಾಗೂ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಬಿ.ಸಂದೀಪ್ ನೇತೃತ್ವದಲ್ಲಿ ಹಲವು ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆಗೆ ಮುಂದಾದರು.
ಈ ವೇಳೆ ಅಂಗಡಿಯ ಮಾಲೀಕ ಮನೋಜ್‌ಕುಮಾರ್ ಬೀಗ ತೆಗೆಯದಿದ್ದಾಗ ಬೆಳಕವಾಡಿ ಪೊಲೀಸರ ಸಮ್ಮುಖದಲ್ಲಿ ಅಧಿಕಾರಿಗಳು ಬೀಗ ಹೊಡೆದು ಪರಿಶೀಲನೆ ನಡೆಸಿದರು. ಈ ವೇಳೆ ಅಪಾರ ಪ್ರಮಾಣದ ನಕಲಿ ಕೀಟನಾಶಕಗಳಿಗೆ ಪ್ರತಿಷ್ಠಿತ ಕಂಪನಿಗಳ ಲೇಬಲ್‌ಗಳನ್ನು ಬಳಸಿ ಮಾರಾಟಕ್ಕೆ ಮುಂದಾಗಿರುವುದು ಬೆಳಕಿಗೆ ಬಂದಿದೆ.ಜಾಗೃತಿ ಕೋಶದ ಉಪ ನಿರ್ದೇಶಕಿ ಮಮತಾ, ತಾಲೂಕು ಸಹಾಯಕ ನಿರ್ದೇಶಕ ಯಾದವ್ ಬಾಬು, ಅಧಿಕಾರಿಗಳಾದ ಚನ್ನಕೇಶವ, ಜಗದೀಶ್, ಕೃಷಿ ಅಧಿಕಾರಿ ರಾಜೇಶ್ ಅವರ ತಂಡ ಸುಮಾರು ೪.೫ ಲಕ್ಷ ರು. ಮೌಲ್ಯದ ನಕಲಿ ಕೀಟನಾಶಕಗಳನ್ನು ವಶಪಡಿಸಿಕೊಂಡರು. ಅಂಗಡಿ ಮಾಲೀಕ ಮನೋಜ್‌ಕುಮಾರ್ ವಿರುದ್ಧ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಂಗಡಿಯ ಪರವಾನಗಿ ರದ್ದುಪಡಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಬಿ.ಸಂದೀಪ್ ತಿಳಿಸಿದರು.