ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ 1.30 ಲಕ್ಷ ದಂಡ ವಿಧಿಸಿ ಇಲ್ಲಿನ ಅಧಿಕ ಸೆಷನ್ಸ್ ಮತ್ತು 2ನೇ ತ್ವರಿತ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಬಿ.ದಿಲೀಪ್‌ಕುಮಾರ್ ತೀರ್ಪು ನೀಡಿದ್ದಾರೆ.ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಅಕ್ಕಿಹೆಬ್ಬಾಳು ಹೋಬಳಿ ನಂದೀಪುರ ಗ್ರಾಮದ ಬಿ.ಎನ್. ಅಪ್ಪು ಅಲಿಯಾಸ್ ಅಪ್ಪುಗೌಡ ಶಿಕ್ಷೆಗೊಳಗಾದ ಅಪರಾಧಿ.
ಪ್ರಕರಣದ ವಿವರ:ಅಪರಾಧಿ ಅಪ್ಪು ಬಿ.ಎನ್. ಅಲಿಯಾಸ್ ಅಪ್ಪುಗೌಡ (23 ವರ್ಷ) ಬಾಲಕಿಯು ಕಾಲೇಜಿಗೆ ಹೋಗುವಾಗ ಮತ್ತು ಬರುವಾಗ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ. ಅಲ್ಲದೇ, ಮದುವೆಯಾಗುವುದಾಗಿ ಹೇಳುತ್ತಿದ್ದ, ಆಗ ಬಾಲಕಿ ನನಗೆ ಇನ್ನೂ ಮದುವೆ ವಯಸ್ಸಾಗಿಲ್ಲವೆಂದು ಹೇಳಿದರೂ ಸಹ ಅಪರಾಧಿ ಮದುವೆ ಮಾಡಿಕೊಂಡರೆ ಯಾರೂ ಕೇಳುವುದಿಲ್ಲ ಎಂದು ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದನು.
ನಂತರ ಬಾಲಕಿ ಕಾಣೆಯಾದ ಬಗ್ಗೆ ನೊಂದ ಬಾಲಕಿಯ ತಂದೆ ಕೆ.ಆರ್.ಪೇಟೆ ಪೊಲೀಸ್ ಪ್ರಕರಣ ದಾಖಲಿಸಿದ್ದರು. ಇನ್ಸ್‌ಪೆಕ್ಟರ್ ಎಂ.ಕೆ.ದೀಪಕ್ ಅವರು ತನಿಖೆ ನಡೆಸಿ ಆರೋಪಿ ವಿರುದ್ಧ ಫೋಕ್ಸೋ ಕಾಯಿದೆ ಪ್ರಕಾರ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಅಧಿಕ ಸೆಷನ್ಸ್ ಮತ್ತು 2ನೇ ತ್ವರಿತ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಬಿ. ದಿಲೀಪ್‌ಕುಮಾರ್ ಅವರು ಆಪಾದಿತ ಅಪ್ಪುಗೌಡ ಎಸಗಿದ ಕೃತ್ಯ ಸಾಭೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20 ವರ್ಷ ಸಜೆ ಹಾಗೂ 1.30 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ 2 ತಿಂಗಳ ಸಾಧಾ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದ್ದರು.