ರೇವ್‌ ಪಾರ್ಟಿ: 8 ಮಂದಿಗೆ ನೋಟಿಸ್‌

| Published : May 30 2024, 01:32 AM IST / Updated: May 30 2024, 04:49 AM IST

ಸಾರಾಂಶ

ಫಾರ್ಮ್‌ ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಮಾದಕ ವಸ್ತು ಸೇವಿಸಿದ ಆರೋಪದಡಿ ತೆಲುಗು ನಟಿ ಹೇಮಾ ಸೇರಿ 8 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಏರಡನೇ ಬಾರಿಗೆ ನೋಟಿಸ್‌ ನೀಡಿದೆ.

 ಬೆಂಗಳೂರು : ಇತ್ತೀಚೆಗೆ ನಗರದ ಹೊರವಲಯದ ಫಾರ್ಮ್‌ ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಮಾದಕ ವಸ್ತು ಸೇವಿಸಿದ ಆರೋಪದಡಿ ತೆಲುಗು ನಟಿ ಹೇಮಾ ಸೇರಿ 8 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಏರಡನೇ ಬಾರಿಗೆ ನೋಟಿಸ್‌ ನೀಡಿದೆ.

ಈ ಹಿಂದೆ ಮೇ 27ರಂದು ವಿಚಾರಣೆಗೆ ಹಾಜರಾಗುವಂತೆ ನಟಿ ಹೇಮಾ ಸೇರಿ 8 ಮಂದಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್‌ ನೀಡಿದ್ದರು. ವಿಚಾರಣೆಗೆ ಗೈರಾಗಿದ್ದ ನಟಿ ಹೇಮಾ ಏಳು ದಿನಗಳ ಕಾಲ ಕಾಲಾವಕಾಶ ಕೇಳಿದ್ದರು. ಇದೀಗ ಸಿಸಿಬಿ ಅಧಿಕಾರಿಗಳು ಜೂ.1ರಂದು ವಿಚಾರಣೆಗೆ ಹಾಜರಾಗುವಂತೆ ಎರಡನೇ ಬಾರಿ ನೋಟಿಸ್‌ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೆಬ್ಬಗೂಡಿಯ ಹುಸ್ಕೂರು ಸಮೀಪದ ಗೋಪಾಲ್‌ ರೆಡ್ಡಿ ಮಾಲೀಕತ್ವದ ಜಿ.ಆರ್‌.ಫಾರ್ಮ್‌ ಹೌಸ್‌ನಲ್ಲಿ ಮೇ 19ರಂದು ‘ಸನ್‌ ರೈಸ್‌ ಟು ಸನ್‌ ಸೆಟ್‌’ ಹೆಸರಿನ ರೇವ್‌ ಪಾರ್ಟಿ ಆಯೋಜಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಪಾರ್ಟಿ ಮೇಲೆ ದಾಳಿ ನಡೆಸಿ 103 ಮಂದಿಯನ್ನು ವಶಕ್ಕೆ ಪಡೆದಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ನಟಿ ಹೇಮಾ, ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಉದ್ಯಮಿಗಳು ಸೇರಿ 86 ಮಂದಿ ಪಾರ್ಟಿಯಲ್ಲಿ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿತ್ತು.

ಈ ಪಾರ್ಟಿ ಆಯೋಜಿಸಿದ್ದ ಹೈದರಾಬಾದ್‌ ಮೂಲದ ವಾಸು, ಅರುಣ್, ಸಿದ್ದಿಕಿ, ನಾಗಬಾಬು ಸೇರಿ ಬಂಧಿಸಿದ್ದ ಐವರು ಆರೋಪಿಗಳನ್ನು 10 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.