ಸಾರಾಂಶ
ಧಾರವಾಡ: ಸಾಮಾಜಿಕ ಮಾಧ್ಯಮಗಳಲ್ಲಿ ಯುವ ಜನಾಂಗಕ್ಕೆ ಇತ್ತೀಚೆಗೆ ವಿಪರೀತ ಹುಚ್ಚು ಹಿಡಿಸಿರುವ ರೀಲ್ಸ್‌ಗಳಿಂದ ಸಾಕಷ್ಟು ಅನಾಹುತಗಳಾಗುತ್ತಿವೆ. ಇಂತಹ ರೀಲ್ಸ್ ಹುಚ್ಚಿಗೆ ಯುವತಿಯೊಬ್ಬಳು ತನ್ನ ಜೀವವನ್ನೇ ಕಳೆದುಕೊಂಡಿರುವ ದುರ್ಘಟನೆ ನಗರದಲ್ಲಿ ನಡೆದಿದೆ.
ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡದ, ಇಲ್ಲಿಯ ಶ್ರೀನಗರದ ನಿವಾಸಿ ಶ್ವೇತಾ ಗುದಗಾಪುರ (24) ಎಂಬುವರು ಮೊಬೈಲ್‌ನಲ್ಲಿ ರೀಲ್ಸ್ ಮಾಡುವ ಘೀಳಿಗೆ ಬಿದ್ದು ಪತಿಯಿಂದ ದೂರವಾಗಿ ಯುವಕನೋರ್ವನ ಸಂಪರ್ಕ ಸಾಧಿಸಿ ತನ್ನ ಜೀವವನ್ನು ಅಂತ್ಯಗೊಳಿಸಿದ್ದಾಳೆ.
ಏನಿದು ರೀಲ್ಸ್ ಕಥೆ:
ಐದು ವರ್ಷಗಳ ಹಿಂದೆ ಶ್ವೇತಾಳನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗದ ವಿಶ್ವನಾಥ ಎಂಬುವರೊಂದಿಗೆ ಮದುವೆ ಮಾಡಿ ಕೊಡಲಾಗಿತ್ತು. ವಿಶ್ವನಾಥ ಡಿಟಿಎಚ್ ಇನ್ಸ್ಟಾಲೇಶನ್ ಕೆಲಸ ಮಾಡಿಕೊಂಡಿದ್ದನು. ಇಬ್ಬರೂ ಪರಸ್ಪರ ಪ್ರೀತಿಯಿಂದಲೇ ಇದ್ದರು. ಆದರೆ, ಶ್ವೇತಾಳಿಗೆ ರೀಲ್ಸ್ ಮಾಡುವ ಹವ್ಯಾಸ ಚಟವಾಗಿ ಬದಲಾಗಿತ್ತು. ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ವಿಜಯ ನಾಯ್ಕರ ಪದೇ ಪದೇ ಕಾಮೆಂಟ್ ಮಾಡಿದ್ದರಿಂದ ಪರಸ್ಪರ ಇಬ್ಬರಿಗೂ ಪರಿಚಯವಾಯಿತು. ಪರಿಚಯ ಬಳಿಕ ಪ್ರೇಮಕ್ಕೆ ತಿರುಗಿತು. ಕೊನೆಗೆ ಆತನೊಂದಿಗೆ ಸಂಪರ್ಕ ಸಾಧಿಸಿ, ಕಳೆದ ಒಂದೂವರೆ ವರ್ಷದ ಹಿಂದೆ ಶ್ವೇತಾ ಪತಿ ತೊರೆದು ಧಾರವಾಡಕ್ಕೆ ಬಂದು ಬಿಟ್ಟಳು. ವಿಜಯ ನಾಯ್ಕರ ಶ್ರೀನಗರದಲ್ಲಿ ಆಕೆಗೆ ಬಾಡಿಗೆ ಮನೆ ಸಹ ಮಾಡಿಕೊಟ್ಟಿದ್ದನು. ಇದೇ ವೇಳೆ ಆಕೆಯನ್ನು ಮದುವೆಯಾಗುವುದಾಗಿ ಹೇಳಿದ ವಿಜಯ, ಆಕೆಯಿಂದ ಪತಿಗೆ ವಿಚ್ಛೇದನಕ್ಕೆ ನೋಟಿಸ್ ಸಹ ಕೊಡಿಸುವ ಪ್ರಯತ್ನ ಮಾಡಿದ್ದನು. ಆದರೆ, ನ್ಯಾಯಾಲಯದಲ್ಲಿ ನಿರೀಕ್ಷೆಯಂತೆ ಇಬ್ಬರಿಗೂ ವಿಚ್ಛೇದನ ಸಿಗಲಿಲ್ಲ. ಪತಿ-ಪತ್ನಿ ಕೂಡಿ ಜೀವನ ಮಾಡಲು ಸೂಚಿಸಿತ್ತು.
ಕಾಣೆಯಾದ ಶ್ವೇತಾ:
ನ್ಯಾಯಾಲಯದ ಆದೇಶದಂತೆ ಕೆಲ ದಿನ ಪತಿ ಮನೆಯಲ್ಲಿದ್ದ ಶ್ವೇತಾ ಏಕಾಏಕಿ ಮನೆಯಿಂದ ಕಾಣೆಯಾದಾಗ ಎಲ್ಲೆಡೆ ಹುಡುಕಿದರೂ ಪತ್ತೆ ಆಗಿರಲಿಲ್ಲ. ಕೊನೆಗೆ ಧಾರವಾಡದಲ್ಲಿದ್ದಾಳೆ ಎಂಬ ಮಾಹಿತಿ ಅನ್ವಯ ಪೋಷಕರು ಹಾಗೂ ಪತಿ ಬಂದು ಕರೆದೊಯ್ಯಲು ಯತ್ನಿಸಿದರೆ ಆಕೆ ಒಪ್ಪಿಕೊಳ್ಳಲಿಲ್ಲ. ತಾನು ವಿಜಯನನ್ನು ಬಿಟ್ಟು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದಳು. ಇದರಿಂದಾಗಿ ನೊಂದ ಪೋಷಕರು ತಮ್ಮೂರಿಗೆ ಮರಳಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಗುರುವಾರ ರಾತ್ರಿ ಶ್ವೇತಾ ತಾನು ಬಾಡಿಗೆ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ.
ಈ ಕುರಿತು ಶ್ವೇತಾಳ ತಾಯಿ ಶಶಿಕಲಾ ಸಾವಂತ ಪ್ರತಿಕ್ರಿಯೆ ನೀಡಿ, ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಆರೋಪಿ ವಿಜಯ ನಾಯ್ಕರ ಕಾರಣ ಎಂದು ಆರೋಪಿಸಿದ್ದಾರೆ.
ಇದೀಗ ಧಾರವಾಡ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತಳ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ವಿಜಯ ನಾಯಕ್ ಮೇಲೆ ಉಪನಗರ ಠಾಣೆಗೆ ಪೋಷಕರು ದೂರು ನೀಡಲು ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ರೀಲ್ಸ್ ಚಟಕ್ಕೆ ಬಿದ್ದು ಇದ್ದ ಒಳ್ಳೆಯ ಸಂಸಾರವನ್ನು ಹಾಳು ಮಾಡಿಕೊಂಡಿದ್ದಲ್ಲದೇ ತಾನು ಕೂಡ ಇಹಲೋಕ ತ್ಯಜಿಸಿ ಹೋಗಿದ್ದು ಮಾತ್ರ ವಿಪರ್ಯಾಸದ ಸಂಗತಿ.