ಮಹಿಳೆಯ ಮುಂದೆ ಪ್ಯಾಂಟ್‌ ಬಿಚ್ಚಿ ಅನುಚಿತ ವರ್ತನೆ: ಕಾರ್ಮಿಕ ಸೆರೆ

| Published : Feb 25 2024, 01:56 AM IST

ಸಾರಾಂಶ

ಮಹಿಳೆ ವಾಸವಿದ್ದ ಮನೆಯ ಹಿಂಬದಿ ಕಿಟಕಿಯ ಮುಂದೆ ನಿಂತು ಜಿಪ್‌ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದ ಕಾರ್ಮಿಕನನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಮಹಿಳೆಯರ ಜತೆ ಅನುಚಿತವಾಗಿ ವರ್ತಿಸಿದ್ದ ಮೂವರು ಅಪ್ರಾಪ್ತ ಬಾಲಕರು ಸೇರಿದಂತೆ ಐವರು ಕಿಡಿಗೇಡಿಗಳನ್ನು ಪ್ರತ್ಯೇಕವಾಗಿ ಪುಲಕೇಶಿನಗರ ಹಾಗೂ ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿ ನಿವಾಸಿ ಬಾಳಪ್ಪ, ರಾಜೇಂದ್ರ ನಗರದ ವಿನೋದ್ ಹಾಗೂ ಮೂವರು ಅಪ್ರಾಪ್ತರು ಬಾಲಕರು ಬಂಧಿತರಾಗಿದ್ದು, ಇವರ ವಿರುದ್ಧ ಸಂತ್ರಸ್ತೆಯರು ನೀಡಿದ ದೂರಿನ್ವಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ಯಾಂಟ್‌ ಬಿಚ್ಚಿ ಅಸಭ್ಯ ವರ್ತನೆ:

ರೈಲ್ವೆ ಹಳಿಗಳ ಸಮೀಪದ ಮನೆಯೊಂದರ ಕಿಟಕಿಯ ಬಳಿ ನಿಂತು ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಮೇರೆಗೆ ಗಾರೆ ಕೆಲಸಗಾರ ಬಾಳಪ್ಪನನ್ನು ಪುಲಕೇಶಿನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಬಾಳಪ್ಪ, ಕೆಂಗೇರಿಯಲ್ಲಿ ವಾಸವಾಗಿದ್ದ. ಹಲವು ದಿನಗಳಿಂದ ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆತ, ಇತ್ತೀಚೆಗೆ ಕೆಲಸದ ನಿಮಿತ್ತ ಪುಲಕೇಶಿನಗರಕ್ಕೆ ಬಂದಿದ್ದ. ಆ ವೇಳೆ ರೈಲ್ವೆ ಹಳಿಗಳ ಸಮೀಪದ ಮನೆ ಬಳಿ ನಿಂತು ಗೃಹಿಣಿ ಕಡೆ ಪ್ಯಾಂಟ್ ಬಿಚ್ಚಿ ಅಸಹ್ಯವಾಗಿ ಬಾಳಪ್ಪ ನಡೆದುಕೊಂಡಿದ್ದ. ಈ ಅಸಭ್ಯ ನಡವಳಿಕೆಯ ಸಹಿಸಲಾರದೆ ಪುಲಕೇಶಿ ನಗರ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.ಬಾಕ್ಸ್‌...

ಯುವತಿ ಮೈ ಮುಟ್ಟಿದ

ಕಿಡಿಗೇಡಿಗಳ ಬಂಧನ

ಮನೆ ಮುಂದೆ ರಾತ್ರಿ ಕಸ ಹಾಕಲು ಗೆಳೆಯನ ಜತೆ ಬಂದಾಗ ಯುವತಿಯ ಎದೆಯನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರು ಆಡುಗೋಡಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಈ ಆರೋಪಿಗಳ ಪೈಕಿ ವಿನೋದ್‌ ವಯಸ್ಕನಾಗಿದ್ದು, ಕೆಲಸವಿಲ್ಲದೆ ಆತ ಅಲೆಯುತ್ತಿದ್ದ. ಇತ್ತೀಚಿಗೆ ಮನೆ ಬಳಿ ಮಧ್ಯೆ ರಾತ್ರಿ ಕಸ ಎಸೆಯಲು ತಮ್ಮ ಗೆಳೆಯನೊಂದಿಗೆ ಸಂತ್ರಸ್ತೆ ಬಂದಿದ್ದರು. ಆ ವೇಳೆ ಆಕೆಯನ್ನು ಅಡ್ಡಗಟ್ಟಿ ಎದೆ ಮುಟ್ಟಿ ಅನುಚಿತವಾಗಿ ಆರೋಪಿಗಳು ನಡೆದುಕೊಂಡಿದ್ದಾರೆ. ಇದಕ್ಕೆ ಆಕೆಯ ಸ್ನೇಹಿತ ಆಕ್ಷೇಪಿಸಿದಾಗ ಕೆರಳಿದ ದುರುಳರು, ಸಂತ್ರಸ್ತೆಯ ಗೆಳೆಯನ ಮೇಲೆ ಹಲ್ಲೆ ನಡೆಸಿ ಬೆದರಿಸಿ ಪರಾರಿಯಾಗಿದ್ದರು. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.