ಸಾರಾಂಶ
ನಿವೃತ್ತ ಎಂಜಿನಿಯರ್‌ರೊಬ್ಬರು ತಮ್ಮ ಮನೆಗೆ ಅಡ್ಡವಾಗಲಿದೆ ಎಂಬ ಕಾರಣಕ್ಕೆ ಸುಮಾರು ಮೂರು ಮರಗಳಿಗೆ ರಾತ್ರಿ ವೇಳೆಯಲ್ಲಿ ಆ್ಯಸಿಡ್ ಹಾಕಿ ನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಕಲ್ಯಾಸಿಪಾಳ್ಯದ ಕೋಟೆ ಬಡಾವಣೆಯ ‘ಸಿ’ ಬೀದಿಯಲ್ಲಿ ನಿವೃತ್ತ ಎಂಜಿನಿಯರ್ ಅವರು ತಮ್ಮ ಮನೆಗೆ ಅಡ್ಡವಾಗುತ್ತಿದೆ ಎಂಬ ಕಾರಣಕ್ಕೆ ಆ್ಯಸಿಡ್ ಹಾಕಿ ಮರಗಳನ್ನು ನಾಶ ಪಡಿಸಲಾಗುತ್ತಿದ್ದಾರೆ ಎಂದು ಬೆಂಗಳೂರು ಕೋಟೆ ಕ್ಷೇಮಾಭಿವೃದ್ಧಿ ಸಂಘ ಆರೋಪಿಸಿದೆ.ಕೋಟೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ತಮ್ಮ ಬಡಾವಣೆ ವ್ಯಾಪ್ತಿಯಲ್ಲಿ ಕಳೆದ ಮೂರ್ನಾಲ್ಕು ವರ್ಷದಿಂದ ರಸ್ತೆ ಬದಿ ಸುಮಾರು 50ಕ್ಕೂ ಅಧಿಕ ಗಿಡ ನೆಟ್ಟು, ಟ್ರಿಗಾರ್ಡ್ ಅಳವಡಿಸಿ ಪೋಷಣೆ ಮಾಡುತ್ತಿದೆ. ಇದೀಗ ಗಿಡಗಳು ದೊಡ್ಡ ಪ್ರಮಾಣಕ್ಕೆ ಬೆಳೆದು ನಿಂತಿವೆ. ಆದರೆ, ಕೋಟೆ ಬಡಾವಣೆಯ ಸಿ ಬೀದಿಯಲ್ಲಿ ಬಾಲಕೃಷ್ಣ ಎಂಬುವವರು ತಮ್ಮ ಮನೆಗೆ ಅಡ್ಡವಾಗಲಿದೆ ಎಂಬ ಕಾರಣಕ್ಕೆ ಸುಮಾರು ಮೂರು ಮರಗಳಿಗೆ ರಾತ್ರಿ ವೇಳೆಯಲ್ಲಿ ಆ್ಯಸಿಡ್ ಹಾಕಿ ನಾಶ ಮಾಡುತ್ತಿದ್ದಾರೆ. ರಾತ್ರಿ 1 ಗಂಟೆ ಸುಮಾರಿಗೆ ಮರಗಳಿಗೆ ಆ್ಯಸಿಡ್ ಹಾಕುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈಗಾಗಲೇ ಮೂರು ಮರಗಳು ಒಣಗಿ ಹೋಗಿವೆ. ಈ ಕುರಿತು ಬಾಲಕೃಷ್ಣ ಅವರನ್ನು ಪ್ರಶ್ನಿಸಿದರೆ ದರ್ಪ ತೋರಿಸುತ್ತಿದ್ದಾರೆ. ಈ ಕುರಿತು ಬಿಬಿಎಂಪಿ ಅರಣ್ಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಬಿಬಿಎಂಪಿ ಅರಣ್ಯ ಅಧಿಕಾರಿಗಳು ಈವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕ್ಷೇಮಾಭಿವೃದ್ಧಿ ಸಂಘದ ವಿಜಯ್ ರಾಜ್ ಆರೋಪಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಇದೇ ಬೀದಿಯಲ್ಲಿ ವಾಸು ಎಂಬುವವರು ಅನಧಿಕೃತವಾಗಿ ಮರದ ಕೊಂಬೆಗಳನ್ನು ಕತ್ತರಿಸುತ್ತಿದ್ದಾರೆ ಎಂದು ದೂರಿದ್ದಾರೆ.