ಸಾರಾಂಶ
ಬೆಳ್ತಂಗಡಿ : ಹೆಂಡತಿಯ ತವರು ಮನೆಯ ಆಸ್ತಿಗಾಗಿ ಮಾವನನ್ನೇ ಕೊಲೆ ಮಾಡಿದ ಅಳಿಯ ಮತ್ತು ಮೊಮ್ಮಗನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಬೆಳಾಲಿನ ಎಸ್‌ಪಿಬಿ ಕಾಂಪೌಡ್ ನಿವಾಸಿ ನಿವೃತ್ತ ಶಿಕ್ಷಕ ಎಸ್.ಪಿ.ಬಾಲಕೃಷ್ಣ ಭಟ್ (83) ಮೃತ. ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ ರಾಘವೇಂದ್ರ ಕೆದಿಲಾಯ (53) ಹಾಗೂ ಇವರ ಮಗ ಮುರಳೀಕೃಷ್ಣ (20) ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ: ಮೃತ ಬಾಲಕೃಷ್ಣ ಅವರ ಮಗಳು ವಿಜಯಲಕ್ಷ್ಮೀಯನ್ನು ರಾಘವೇಂದ್ರ ಮದುವೆಯಾಗಿದ್ದ. ಈ ದಂಪತಿಯ ಮಗನೇ ಮುರಳೀಕೃಷ್ಣ. ನಿವೃತ್ತ ಶಿಕ್ಷಕ ಬಾಲಕೃಷ್ಣ ಅವರ ಮೃತಪಟ್ಟ ಪತ್ನಿಯ ಚಿನ್ನಾಭರಣ ಹಾಗೂ ತವರು ಮನೆಯ ಆಸ್ತಿಯ ವಿಚಾರವಾಗಿ ಕುಟುಂಬಗಳ ನಡುವೆ ಜಗಳವಿತ್ತು. "ನಾನು ಬದುಕಿರುವವರೆಗೂ ಆಸ್ತಿಯನ್ನು ಪಾಲು ಮಾಡುವುದಿಲ್ಲ " ಎಂದು ಬಾಲಕೃಷ್ಣ ಹೇಳಿದ್ದರು. ಹಾಗಾಗಿ ಆ.20ರಂದು ಸ್ಕೂಟರ್ ಮೂಲಕ ಮನೆಗೆ ನುಗ್ಗಿದ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಸಿಸಿಟಿವಿ ದೃಶ್ಯ ಮತ್ತು ಮೊಬೈಲ್ ಲೊಕೇಶನ್ ಆಧಾರಿಸಿ ಅಳಿಯ ಮತ್ತು ಮೊಮ್ಮಗನನ್ನು ಬಂಧಿಸಿದ್ದಾರೆ.