ಸಾರಾಂಶ
ಬೆಂಗಳೂರು : 2003ರಲ್ಲಿ ಭಾವಿ ಪತಿ ಸಾಫ್ಟ್‌ವೇರ್ ಎಂಜಿನಿಯರ್ ಬಿ.ವಿ.ಗಿರೀಶ್ ಹತ್ಯೆ ಪ್ರಕರಣದಲ್ಲಿ ಶುಭಾ ಮತ್ತು ಆಕೆಯ ಪ್ರಿಯಕರ ಸೇರಿ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿ ಸುಪ್ರಿಂ ಕೋರ್ಟ್ ಸೋಮವಾರ ಅಂತಿಮ ತೀರ್ಪು ನೀಡಿದೆ.
ಪ್ರಕರಣ ಸಂಬಂಧ ತಮಗೆ ಜೀವಾವಧಿ ಶಿಕ್ಷೆ ವಿಧಿಸಿ 2010ರಲ್ಲಿ ಅಧೀನ ನ್ಯಾಯಾಲಯ ಮತ್ತು 2011ರಲ್ಲಿ ಹೈಕೋರ್ಟ್ ಹೊರಡಿಸಿದ್ದ ತೀರ್ಪು ರದ್ದುಪಡಿಸಬೇಕು ಮತ್ತು ತಮ್ಮನ್ನು ಖುಲಾಸೆಗೊಳಿಸಬೇಕು ಎಂದು ಕೋರಿ ಆರೋಪಿಗಳಾದ ಡಿ.ಅರುಣ್ ವರ್ಮಾ (ಎ-1). ಎ.ವೆಂಕಟೇಶ್ (ಎ-2), ದಿನೇಶ್ (ಎ-3) ಮತ್ತು ಶುಭಾ (ಎ-2) ಸುಪ್ರೀಂ ಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.
ಈ ನಾಲ್ವರ ಕ್ರಿಮಿನಲ್ ಮೇಲ್ಮನವಿಗಳನ್ನು ವಜಾಗೊಳಿಸಿ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಎನ್.ಕೆ. ಸಿಂಗ್ ಅವರಿದ್ದ ವಿಭಾಗೀಯ ಪೀಠ ಸೋಮವಾರ ಆದೇಶಿಸಿದೆ.
ಶುಭಾ ಹಾಗೂ ಪ್ರಕರಣ ಇತರೆ ಮೂವರು ಆರೋಪಿಗಳು ಸಂಚು ರೂಪಿಸಿ ಗಿರೀಶ್ ಅವರನ್ನು ಕೊಲೆ ಮಾಡಿರುವುದು ಎಲ್ಲ ಸಾಕ್ಷ್ಯಧಾರಗಳಿಂದ ಸಾಬೀತಾಗಿರುವುದರಿಂದ ಆರೋಪಿಗಳಿಗೆ ಹೈಕೋರ್ಟ್ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯಲಾಗುತ್ತಿದೆ ಎಂದು ಸುಪ್ರಿಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಆಲೋಚನಾ ಶಕ್ತಿ ಹೆಚ್ಚಿರದ ಯೌವನದಲ್ಲಿ ದುಡುಕಿ ಕೊಲೆ ಮಾಡಿರುವುದರಿಂದ ರಾಜ್ಯಪಾಲರಲ್ಲಿ ಕ್ಷಮದಾನ ಕೋರಲು ಎಲ್ಲ ಆರೋಪಿಗಳಿಗೆ ಅವಕಾಶ ಕಲ್ಪಿಸಲು ಸುಪ್ರೀಂ ಕೋರ್ಟ್ ಇದೇ ವೇಳೆ ಆದೇಶಿಸಿದೆ.
ಗಿರೀಶ್ ಕೊಲೆ ಘಟನೆ ನಡೆದಿರುವುದು 2003ರಲ್ಲಿ. ಆಗ ಎಲ್ಲ ನಾಲ್ವರು ಆರೋಪಿಗಳು ಯೌವನದಲ್ಲಿದ್ದರು. ಶುಭಾಗೆ ಮೃತ ಗಿರೀಶ್ ಅವರನ್ನು ವಿವಾಹವಾಗಲು ಇಷ್ಟವಿರಲಿಲ್ಲ. ಈ ಸಮಸ್ಯೆಯನ್ನು ತಪ್ಪು ವಿಧಾನದಲ್ಲಿ ನಿಭಾಯಿಸಲಾಗಿದೆ. ತಿಳಿವಳಿಕೆಯ ಕೊರತೆಯಿಂದ ಗಿರೀಶ್‌ನನ್ನು ಕೊಲೆ ಮಾಡಲಾಗಿದೆ. ಘಟನೆ ನಡೆದು ಎರಡು ದಶಕಗಳೇ ಕಳೆದಿವೆ. ಮೂರನೇ ಆರೋಪಿ ದಿನೇಶ್‌ಗೆ 28 ವರ್ಷ. ಆತ ಇತ್ತೀಚೆಗೆ ಮದುವೆಯಾಗಿದ್ದು, ಮಗು ಜನಿಸಿದೆ. ಜೈಲಿನಲ್ಲಿದ್ದ ಸಮಯದಲ್ಲಿ ಆರೋಪಿಗಳು ಸನ್ನಡತೆ ತೋರಿದ್ದಾರೆ. ಅವರು ಹುಟ್ಟಿನಿಂದಲೇ ಕ್ರಿಮಿನಲ್‌ಗಳಲ್ಲ. ಆದರೆ, ಜೀವನದಲ್ಲಿ ಒಂದು ಅಪಾಯಕಾರಿ ಕೆಲಸ ಮಾಡಲು ತೆಗೆದುಕೊಂಡು ಕೆಟ್ಟ ತೀರ್ಮಾನ ಒಂದು ಕೊಲೆ ಅಪರಾಧವನ್ನು ಮಾಡಲು ದಾರಿಯಾಯಿತು ಎಂದು ಆದೇಶದಲ್ಲಿ ನ್ಯಾಯಪೀಠ ಹೇಳಿದೆ.
ಜೊತೆಗೆ, ಕೊಲೆ ಮಾಡಿದಾಗ ಯೌವನದಲ್ಲಿದ್ದ ಆರೋಪಿಗಳು ಈಗ ಮಧ್ಯ ವಯಸ್ಕರಾಗಿದ್ದಾರೆ. ಆದ್ದರಿಂದ ಅವರಿಗೆ ಹೊಸ ಜೀವನ ಆರಂಭಿಸುವ ಒಂದು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಅದರಂತೆ ಕ್ಷಮಾದಾನ ಕೋರಿ ಶುಭಾ ಹಾಗೂ ಇತರೆ ಆರೋಪಿಗಳು ಮುಂದಿನ 8 ವಾರಗಳಲ್ಲಿ ರಾಜ್ಯಪಾಲರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಬಹುದು. ಆ ಮನವಿಯನ್ನು ರಾಜ್ಯಪಾಲರು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ರಾಜ್ಯಪಾಲರು ಕ್ಷಮಾದಾನದ ಮನವಿಗಳನ್ನು ನಿರ್ಧರಿಸುವವರೆಗೂ ಜಾಮೀನು ಮೇಲಿರುವ ಆರೋಪಿಗಳನ್ನು ಬಂಧಿಸಬಾರದು ಎಂದು ಪೊಲೀಸರಿಗೆ ನ್ಯಾಯಪೀಠ ನಿರ್ದೇಶಿಸಿದೆ.
ಪ್ರಕರಣವೇನು?:
2003ರ ನವೆಂಬರ್ ತಿಂಗಳಲ್ಲಿ ಬೆಂಗಳೂರಿನ ಅಡ್ವೊಕೇಟ್ ಶುಭಾ ವಿವಾಹದ ನಿಶ್ಚಿತಾರ್ಥ ತನ್ನ ನೆರೆಹೊರೆಯ ನಿವಾಸಿ ಸಾಫ್ಟ್‌ವೇರ್ ಎಂಜಿನಿಯರ್ ಬಿ.ವಿ.ಗಿರೀಶ್ ಅವರೊಂದಿಗೆ ನಡೆದಿತ್ತು. ಐದು ತಿಂಗಳ ನಂತರ ವಿವಾಹ ನಿಗದಿಯಾಗಿತ್ತು. ಬಿ.ಎಂ.ಎಸ್. ಲಾ ಕಾಲೇಜಿನಲ್ಲಿ ಓದುತ್ತಿದ್ದಾಗ ತನ್ನ ಕಿರಿಯ ಸಹಪಾಠಿಯಾಗಿದ್ದ ಅರುಣ್ ವರ್ಮನನ್ನು ಪ್ರೀತಿಸಿದ್ದ ಶುಭಾ, ಗಿರೀಶ್ ಅವರನ್ನು ಕೊಲೆ ಮಾಡುವ ಸಂಚು ರೂಪಿಸಿದಳು.
ಅದರಂತೆ 2003ರ ಡಿ.3ರಂದು ರಾತ್ರಿ ಊಟದ ನೆಪದಲ್ಲಿ ಗಿರೀಶ್ ಅವರನ್ನು ಶುಭಾ, ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣದಿಂದ ಏರುವ ಮತ್ತು ಇಳಿಯುವ ವಿಮಾನಗಳನ್ನು ನೋಡಲು ಜನ ಜಮಾಯಿಸುತ್ತಿದ್ದ ಇಂದಿರಾನಗರ-ಕೋರಮಂಗಲದ ಬಳಿಯ ರಿಂಗ್ ರೋಡ್ ಜಂಬೋ ಪಾಯಿಂಟ್ ಬಳಿಗೆ ಕರೆ ತಂದಿದ್ದಳು. ಅರುಣ್ ವರ್ಮಾ ಗೊತ್ತುಮಾಡಿದ್ದ ರೌಡಿ ವೆಂಕಟೇಶ್, ಹಿಂದಿನಿಂದ ಬಂದು ಗಿರೀಶ್ ತಲೆಗೆ ಬಲವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಗಿರೀಶ್ ಸಾವಿಗೀಡಾಗಿದ್ದರು.
ನಂತರ ವಿವೇಕನಗರದ ಪೊಲೀಸರು ಆರೋಪಿಗಳನ್ನು ಬಂಧಿಸಿ ಕೇಸು ದಾಖಲಿಸಿದ್ದರು. ಪ್ರಕರಣ 2003ರಲ್ಲಿ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಮೂರು ತಿಂಗಳು ಜೈಲುವಾಸದ ಬಳಿಕ ಆರೋಪಿಗಳಿಗೆ ಜಾಮೀನು ದೊರೆತಿತ್ತು. 2010ರಲ್ಲಿ ಅಧೀನ ನ್ಯಾಯಾಲಯ ಎಲ್ಲ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಆ ಶಿಕ್ಷೆಯನ್ನು 2011ರಲ್ಲಿ ಹೈಕೋರ್ಟ್ ಕಾಯಂಗೊಳಿಸಿತ್ತು. ಇದರಿಂದ ಎಲ್ಲ ಆರೋಪಿಗಳು ಸುಪ್ರಿಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
)
;Resize=(128,128))
;Resize=(128,128))
;Resize=(128,128))