ರೋಲ್ಡ್‌ ಗೋಲ್ಡ್‌ ಸರ ಮಾರಾಟ ವಿಚಾರಕ್ಕೆ ಭಾವನ ಇರಿದು ಹತ್ಯೆ

| Published : Feb 12 2025, 01:31 AM IST

ರೋಲ್ಡ್‌ ಗೋಲ್ಡ್‌ ಸರ ಮಾರಾಟ ವಿಚಾರಕ್ಕೆ ಭಾವನ ಇರಿದು ಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷುಲ್ಲಕ ಕಾರಣಕ್ಕೆ ತನ್ನ ಭಾವನನ್ನು ಹತ್ಯೆಗೈದು ರೋಲ್ಡ್ ಗೋಲ್ಡ್‌ ಸರಗಳ ವ್ಯಾಪಾರಿಯೊಬ್ಬ ಪರಾರಿಯಾಗಿರುವ ಘಟನೆ ನಗರದ ಕ್ರಾಂತಿವೀರ ಸಂಗೊಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕ್ಷುಲ್ಲಕ ಕಾರಣಕ್ಕೆ ತನ್ನ ಭಾವನನ್ನು ಹತ್ಯೆಗೈದು ರೋಲ್ಡ್ ಗೋಲ್ಡ್‌ ಸರಗಳ ವ್ಯಾಪಾರಿಯೊಬ್ಬ ಪರಾರಿಯಾಗಿರುವ ಘಟನೆ ನಗರದ ಕ್ರಾಂತಿವೀರ ಸಂಗೊಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ವೆಂಕಟೇಶ್ (38) ಕೊಲೆಯಾದ ದುರ್ದೈವಿ. ಈ ಹತ್ಯೆ ಎಸಗಿ ಪರಾರಿಯಾಗಿರುವ ಆತನ ಸೋದರಿ ಪತಿ ರಾಮು ಪತ್ತೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ರೈಲ್ವೆ ನಿಲ್ದಾಣದ ವಾಹನಗಳ ನಿಲುಗಡೆ ಪ್ರದೇಶದಲ್ಲಿ ರೋಲ್ಡ್ ಗೋಲ್ಡ್‌ ಸರಗಳ ಮಾರಾಟದ ವಿಚಾರವಾಗಿ ಸೋಮವಾರ ರಾತ್ರಿ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಸಿಟ್ಟಿಗೆದ್ದ ರಾಮು, ತನ್ನ ಭಾವ ವೆಂಕಟೇಶ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಕೂಡಲೇ ಗಾಯಾಳುವಿಗೆ ರೈಲ್ವೆ ನಿಲ್ದಾಣದಲ್ಲಿದ್ದ ಆ್ಯಂಬುಲೆನ್ಸ್ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಆದರೆ ತೀವ್ರ ರಕ್ತಸ್ರಾವವಾಗಿ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ದಿನಗಳಿಂದ ರೈಲ್ವೆ ನಿಲ್ದಾಣದಲ್ಲಿ ರೋಲ್ಡ್ ಗೋಲ್ಡ್ ಸರಗಳನ್ನು ಮಾರಾಟ ಮಾಡಿಕೊಂಡು ಭಾವ-ಬಾಮೈದ ಜೀವನ ಸಾಗಿಸುತ್ತಿದ್ದರು. ಆದರೆ ಕ್ಷುಲ್ಲಕ ಕಾರಣಕ್ಕೆ ಅವರಿಬ್ಬರ ಮಧ್ಯೆ ಉಂಟಾದ ಮನಸ್ತಾಪವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.