ಸಾರಾಂಶ
ಮಂಡ್ಯ : ನಗರದ ಬೆಂಗಳೂರು- ಮೈಸೂರು ಹೆದ್ದಾರಿಯ ಜಿಲ್ಲಾಸ್ಪತ್ರೆ ಎದುರಿನಲ್ಲಿ ಪೆಟ್ರೋಲ್ ಸೋರಿಯಿಂದ ರಾಯಲ್ ಎನ್ ಫೀಲ್ಡ್ ಬೈಕ್ ನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ರಾಯಲ್ ಎನ್ ಫೀಲ್ಡ್ ಕೆಎ 11 ಈ ಜೆ 9766 ಬೈಕ್ ಪೆಟ್ರೋಲ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡು ಪೆಟ್ರೋಲ್ ಟ್ಯಾಂಕ್ ಸಿಡಿದಿದ್ದು, ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿ ಆಗಬಹುದಾದ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮಂಡ್ಯ ಅಗ್ನಿಶಾಮಕ ಠಾಣೆ ಠಾಣಾಧಿಕಾರಿ ವೆಂಕಟೇಶ್ ಮತ್ತು ಅಧಿಕಾರಿ, ಸಿಬ್ಬಂದಿಯವರು ಭಾಗಿಯಾಗಿದ್ದು, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಎಂ.ರಾಘವೇಂದ್ರ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.
ಅಸಭ್ಯ ವರ್ತನೆ: ಸಾರ್ಜವನಿಕರಿಂದ ಥಳಿತ ಕೇರಳ ಪ್ರವಾಸಿಗ ಸಾವು
ಶ್ರೀರಂಗಪಟ್ಟಣ: ಪ್ರವಾಸಿತಾಣ ಕೆಆರ್‌ಎಸ್ ಬೃಂದಾವಾನದಲ್ಲಿ ಶನಿವಾರ ತಡರಾತ್ರಿ ಪ್ರವಾಸಕ್ಕೆ ಬಂದಿದ್ದ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಾರ್ವಜನಿಕರು ಥಳಿಸಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ನಡೆದಿದೆ.
ಕೇರಳ ಮೂಲದ ಪ್ರವಾಸಿಗ ಜಾರ್ಜ್ ಜೋಸ್‌ಫ್ (45)ಗೆ ಸ್ಥಳದಲ್ಲಿದ್ದ ಸಾರ್ವಜನಿಕರು ಥಳಿಸಿದ್ದರಿಂದ ಮೃತಪಟ್ಟ ವ್ಯಕ್ತಿ.
ಈತ ಸ್ನೇಹಿತರೊಂದಿಗೆ ಕೇರಳದಿಂದ ಬೃಂದಾವನ ವೀಕ್ಷಣೆಗೆ ಆಗಮಿಸಿ ಸಂಗೀತ ಕಾರಜಿ ನೋಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದರಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರು ಥಳಿಸಿದ್ದಾರೆ. ಇದರಿಂದ ಕುಸಿದು ಬಿದ್ದ ಥಳಿತಕ್ಕೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಮೃತಪಟ್ಟಿದ್ದಾನೆ. ಈ ಸಂಬಂಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಗೆ ಮುಂದಾಗಿದ್ದಾರೆ.