ಸಾರಾಂಶ
ಕುಸಿತಕ್ಕೆ ಒಳಗಾದ ಪುನರ್ನಿರ್ಮಾಣಗೊಳ್ಳುತ್ತಿದ್ದ ಮಹಾರಾಣಿ ಕಾಲೇಜು ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕ ಸದ್ದಾಂ ದುರಂತ ಅಂತ್ಯ ಕಂಡಿದ್ದಾರೆ.
ಮೈಸೂರು : ಕುಸಿತಕ್ಕೆ ಒಳಗಾದ ಪುನರ್ನಿರ್ಮಾಣಗೊಳ್ಳುತ್ತಿದ್ದ ಮಹಾರಾಣಿ ಕಾಲೇಜು ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕ ಸದ್ದಾಂ ದುರಂತ ಅಂತ್ಯ ಕಂಡಿದ್ದಾರೆ.
ಗೌಸಿಯಾನಗರ ನಿವಾಸಿ ಸದ್ದಾಂ (32) ಮೃತರು. ಮಂಗಳವಾರ ತಡರಾತ್ರಿ 1.30ರ ಸುಮಾರಿನಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಮೃತ ದೇಹವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಡುವೆ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿರುವುದಾಗಿ ಮೃತ ಸದ್ದಾಂನ ಕುಟುಂಬ ಸದಸ್ಯರು ಲಕ್ಷ್ಮೀಪುರಂ ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತ ಸದ್ದಾಂಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದರು. ಘಟನಾ ಸ್ಥಳದಲ್ಲಿ ಮೃತರ ಬಂಧುಗಳ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ರಾತ್ರಿ 8 ಗಂಟೆಯಿಂದಲೂ ಸ್ಥಳದಲ್ಲಿಯೇ ಹಾಜರಿದ್ದ ಸದ್ದಾಂ ಕುಟುಂಬ ಸದಸ್ಯರು, ಆತ ಜೀವಂತವಾಗಿ ಬರಲೆಂದು ಪ್ರಾರ್ಥಿಸಿದ್ದು ಕೊನೆಗೂ ಈಡೇರಲಿಲ್ಲ. ಸದ್ದಾಂ ಮೃತದೇಹ ರಕ್ತಸಿಕ್ತವಾಗಿತ್ತು.
ಮಂಗಳವಾರ ಸಂಜೆ 5.30ರ ವೇಳೆಗೆ ಆರಂಭವಾದ ತೆರವು ಕಾರ್ಯಾಚರಣೆ ತಡರಾತ್ರಿ 1.30ರ ವೇಳೆಗೆ ಅಂತ್ಯಗೊಂಡಿತು. ಮೃತ ದೇಹವನ್ನು ಪೊಲೀಸರ ನೆರವಿನೊಂದಿಗೆ ಆಂಬ್ಯುಲೆನ್ಸ್ಮೂಲಕ ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿಕೊಡಲಾಯಿತು. ಬುಧವಾರ ಮಧ್ಯಾಹ್ನದ ವೇಳಗೆ ಸದ್ದಾಂ ಅವರ ಮೃತ ದೇಹವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು.
109 ವರ್ಷ ಹಳೆಯದಾದ ಮಹಾರಾಣಿ ಕಲಾ ಕಾಲೇಜಿನ ಕಟ್ಟಡ ಪಾರಂಪರಿಕ ಕಟ್ಟಡ ವ್ಯಾಪ್ತಿಗೆ ಸೇರಿದೆ. ಕೆಲ ವರ್ಷಗಳ ಹಿಂದೆ ಕಟ್ಟಡದ ಒಂದು ಭಾಗ ಕುಸಿದಿತ್ತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಹೀಗಾಗಿ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಮರು ನಿರ್ಮಾಣ ಕಾಮಗಾರಿಯನ್ನು ಮಂಡ್ಯ ಮೂಲದ ಚಂದ್ರಶೇಖರ್ ಎಂಬವರಿಗೆ ಗುತ್ತಿಗೆ ನೀಡಲಾಗಿತ್ತು. ಹೀಗಾಗಿ ಸ್ಥಳೀಯ ಕಾರ್ಮಿಕರು ಕಟ್ಟಡದ ಮೊದಲನೇ ಅಂತಸ್ತಿನಲ್ಲಿ ಕಟ್ಟಡ ಕೆಡುವ ಕಾಮಗಾರಿಯನ್ನು ಕಳೆದ ನಾಲ್ಕು ದಿನಗಳಿಂದ ಆರಂಭಿಸಿದ್ದರು.
ಅದರಂತೆ ಮಂಗಳವಾರ ಬೆಳಗ್ಗೆ 9 ಗಂಟೆಯಿಂದಲೇ 15 ಮಂದಿ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಸಂಜೆ 4.30 ರವರೆಗೂ ಕಾಮಗಾರಿ ನಡೆಸಿದ್ದರು. ಸಂಜೆ ಎಲ್ಲರೂ ಸೇರಿ ಚಹಾ ಸೇವಿಸಿದ್ದಾರೆ. ಸದ್ದಾಂ, ತನ್ನ ಬಟ್ಟೆಗಳು ಮೇಲಿವೆ ತರುತ್ತೇನೆ ಎಂದು ಹೋಗಿದ್ದ ವೇಳೆ ಈ ಅವಘಡ ನಡೆದಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಕೆ. ಹರೀಶ್‌ಗೌಡ, ಕಾರ್ಮಿಕ ಸದ್ದಾಂ ಜೀವಂತವಾಗಿ ಸಿಗುತ್ತಾರೆ ಎಂದು ನಂಬಿದ್ದೆವು. ಆದರೆ, ನಮ್ಮ ನಿರೀಕ್ಷೆ ಹುಸಿಯಾಗಿದೆ. ಅವರು ಮೃತಪಟ್ಟಿರುವುದು ನೋವಿನ ಸಂಗತಿ. ಕಾಮಗಾರಿ ಗುತ್ತಿಗೆ ಪಡೆದವರಿಂದ ಹಾಗೂ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲು ಬದ್ಧನಾಗಿದ್ದೇನೆ. ಈ ಸಂಬಂಧ ಸರ್ಕಾರ ಹಾಗೂ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು.
ಪರಿಹಾರ ಕೊಡಲಿ:
ಇಡೀ ಕುಟುಂಬಕ್ಕೆ ಅವನೇ ಆಧಾರ, ತಂದೆ ಕಳೆದುಕೊಂಡ ಇಬ್ಬರು ಹೆಣ್ಣು ಮಕ್ಕಳಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಮೃತ ಸದ್ದಾಂ ಸಹೋದರ ಮನ್ಸೂರು ಖಾನ್ ಒತ್ತಾಯಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಲಸಕ್ಕೆ ಕರೆದುಕೊಂಡು ಹೋಗಿದ್ದರು. ತಾರಿಸಿ ಕುಸಿದು ಆಘಾತ ಸಂಭವಿಸಿದೆ. ಕಳೆದ ಎರಡು ದಿನಗಳಿಂದ ಕಾಲೇಜು ಕಟ್ಟಡದ ಕೆಲಸಕ್ಕೆ ಹೋಗಿದ್ದ, ಇಡೀ ಕುಟುಂಬಕ್ಕೆ ಅವನೇ ಆಧಾರವಾಗಿದ್ದ, ಅವನಿಗೆ ಎರಡು ಹೆಣ್ಣು ಮಕ್ಕಳು ಇದ್ದಾರೆ, ಸರ್ಕಾರ ಪರಿಹಾರ ನೀಡಿ ಸಹಾಯ ಮಾಡಬೇಕು. ಎಂಜಿನಿರ್ ಸ್ಥಳಕ್ಕೆ ಬಂದು ಪರಿಶೀಲಿಸಿದ ಬಳಿಕ ಮುಂದಿನ ಕೆಲಸ ಮಾಡಬೇಕಿತ್ತು ಎಂದು ಆರೋಪಿಸಿದ್ದಾರೆ.