ಸಂಬಳ ಸಾಕಾಗದೆ ಬೈಕ್‌ ಕಳ್ಳತನ ಆರಂಭಿಸಿದ್ದ ಸ್ವಿಗ್ಗಿ ಡೆಲಿವರಿ ಬಾಯ್‌ನನ್ನು ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಸುಲಭವಾಗಿ ಹಣ ಗಳಿಸಲು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಸ್ವಿಗ್ಗಿ ಡೆಲಿವರಿ ಬಾಯ್‌ನನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಎಚ್‌ಬಿಆರ್‌ ಲೇಔಟ್‌ನ ಇಲಾಲ್‌ನಗರ ನಿವಾಸಿ ಎಸ್‌.ಎಂ.ಜಸೀಂ(27) ಎಂಬಾತನಿಂದ ₹2.95 ಲಕ್ಷ ಮೌಲ್ಯದ ನಾಲ್ಕು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಪುಲಕೇಶಿನಗರದಲ್ಲಿ ವ್ಯಕ್ತಿಯೊಬ್ಬರು ಮನೆ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಎಸ್‌.ಎಂ.ಜಸೀಂ ರಾಪಿಡೋ ಮತ್ತು ಸ್ವಿಗ್ಗಿ ಡೆಲಿವರಿ ಬಾಯ್‌ ಕೆಲಸ ಮಾಡುತ್ತಿದ್ದ. ಈ ಹಣ ಸಾಕಾಗದೆ ಸುಲಭವಾಗಿ ಹಣ ಗಳಿಸಲು ದ್ವಿಚಕ್ರ ವಾಹನ ಕಳ್ಳತನಕ್ಕೆ ಇಳಿದಿದ್ದ. ಮನೆ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳನ್ನು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ. ಈ ಕದ್ದ ವಾಹನಗಳಿಗೆ ದಾಖಲೆಗಳು ಇಲ್ಲದಿರುವ ಹಿನ್ನೆಲೆಯಲ್ಲಿ ವಿಲೇವಾರಿ ಮಾಡಲಾಗದೆ ತನ್ನ ಬಳಿಯೇ ಇರಿಸಿಕೊಂಡು ಓಡಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಯ ಬಂಧನದಿಂದ ಪುಲಕೇಶಿನಗರ, ಬಾಣಸವಾಡಿ, ಹೆಬ್ಬಗೋಡಿ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.