ಸಾರಾಂಶ
ಬೆಂಗಳೂರು : ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಹಾಡಹಗಲೇ ಬೀಗ ಮುರಿದು ಕಳವು ಮಾಡುತ್ತಿದ್ದ ದಂಪತಿ ಸೇರಿ ಮೂವರು ಆರೋಪಿಗಳನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶ ಮೂಲದ ಅಕ್ಬರ್(38), ಈತನ ಪತ್ನಿ ಮುಬೀನಾ(32) ಹಾಗೂ ಸೋನು ಯಾದವ್(39) ಬಂಧಿತರು. ಆರೋಪಿಗಳಿಂದ 30.50 ಲಕ್ಷ ರು. ಮೌಲ್ಯದ 405 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಕಳೆದ ಮೇ 10ರಂದು ಎಇಸಿಎಸ್ ಲೇಔಟ್ ನಿವಾಸಿಯೊಬ್ಬರ ಮನೆಯಲ್ಲಿ ಹಾಡಹಗಲೇ ಬೀಗ ಮುರಿದು ದುಷ್ಕರ್ಮಿಗಳು ಚಿನ್ನಾಭರಣ ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್ಸ್‌ಪೆಕ್ಟರ್ ಭಾಗ್ಯವತಿ ಜೆ.ಬಂಟ ನೇತೃತ್ವದಲ್ಲಿ ಸಿನಿಮೀಯ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಟಿವಿ ನೀಡಿದ ಸುಳಿವು:
ಪ್ರಕರಣದ ದಾಖಲಾದ ಬೆನ್ನಲ್ಲೇ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಗೆ ಮುಂದಾಗಿದ್ದರು. ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ವೇಳೆ ಸಿಕ್ಕ ಸುಳಿವು ಆಧರಿಸಿ ತನಿಖೆ ಮುಂದುವರೆಸಿದ ಪೊಲೀಸರು, ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಆರೋಪಿ ಸೋನು ಯಾದವ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಬಳಿಕ ಆತ ನೀಡಿದ ಮಾಹಿತಿ ಹಾಗೂ ಕೆಲ ತಾಂತ್ರಿಕ ಸುಳಿವು ಆಧರಿಸಿ ಪೊಲೀಸರ ತಂಡವೊಂದು ದೆಹಲಿ ಮತ್ತು ಉತ್ತರಪ್ರದೇಶಕ್ಕೆ ತೆರಳಿ ಸ್ಥಳೀಯ ಪೊಲೀಸರ ನೆರವು ಪಡೆದು ಸಿನಿಮೀಯ ಶೈಲಿಯಲ್ಲಿ ಆರೋಪಿಗಳಾದ ಅಕ್ಬರ್ ಮತ್ತು ಆತನ ಪತ್ನಿ ಮುಬೀನಾಳನ್ನು ಗಾಜಿಯಾಬಾದ್‌ನಲ್ಲಿ ಬಂಧಿಸಿ ನಗರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಉತ್ತರಪ್ರದೇಶ ಮತ್ತು ದೆಹಲಿಯ ಜ್ಯುವೆಲರಿ ಅಂಗಡಿಯಲ್ಲಿ ಅಡಮಾನವಿರಿಸಿದ್ದ ಒಟ್ಟು 405 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ವಿವಿಧ ರಾಜ್ಯಗಳಲ್ಲಿ ಮನೆಗಳವು : ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದಾರೆ. ಈ ಹಿಂದೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮನೆಗಳವು ಮಾಡಿದ್ದಾರೆ. ಬಂಧಿತ ಮೂವರ ಪೈಕಿ ಅಕ್ಬರ್ ಮತ್ತು ಸೋನು ಯಾದವ್ ವಿಮಾನ ಅಥವಾ ರೈಲಿನಲ್ಲಿ ಬೆಂಗಳೂರಿಗೆ ಬಂದು ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ಬಳಿಕ ಬೀಗ ಮುರಿದು ಕಳವು ಮಾಡು ಪರಾರಿಯಾಗುತ್ತಿದ್ದರು. ಕದ್ದ ಚಿನ್ನಾಭರಣಗಳನ್ನು ದೆಹಲಿಯಲ್ಲಿ ಪತ್ನಿ ಮುಬೀನಾಳ ಮುಖಾಂತರ ವಿಲೇವಾರಿ ಮಾಡಿ ಹಣ ಪಡೆದು ಮೋಜು-ಮಸ್ತಿ ಮಾಡುತ್ತಿದ್ದರು.
ಕದ್ದ ಬಳಿಕ ಪತ್ನಿ ಮೊಬೈಲ್‌ಗೆ ಕರೆ ಮಾಡಿ ಸಿಕ್ಕಿಬಿದ್ದ !
ಆರೋಪಿಗಳಾದ ಅಕ್ಬರ್ ಮತ್ತು ಸೋನು ಯಾದವ್ ಅಂದು ಸಂಜಯನಗರದ ಎಇಸಿಎಸ್ ಲೇಔಟ್‌ನಲ್ಲಿ ಮನೆಗಳವು ಮಾಡಿದ ಬಳಿಕ ಆಟೋರಿಕ್ಷಾದಲ್ಲಿ ಮೆಜೆಸ್ಟಿಕ್‌ಗೆ ಬಂದಿದ್ದಾರೆ. ಬಳಿಕ ಸೋನಿ ಯಾದವ್ ಆಟೋ ಇಳಿದು ಬಸ್ ನಿಲ್ದಾಣದತ್ತ ತೆರಳಿದ್ದಾನೆ. ಆರೋಪಿ ಅಕ್ಬರ್ ತುರ್ತು ಕರೆ ನೆಪವೊಡ್ಡಿ ಆ ಆಟೋ ಚಾಲಕನ ಮೊಬೈಲ್ ಪಡೆದು ದೆಹಲಿಯಲ್ಲಿದ್ದ ತನ್ನ ಪತ್ನಿ ಮುಬೀನಾಗೆ ಕರೆ ಮಾಡಿ ಚಿನ್ನಾಭರಣ ಕಳವು ಮಾಡಿರುವ ವಿಚಾರ ತಿಳಿಸಿದ್ದ.
ಬಳಿಕ ಆ ಮೊಬೈಲ್ ಸಂಖ್ಯೆ ಡಿಲೀಟ್ ಮಾಡಿ ಆಟೋ ಚಾಲಕನಿಗೆ ನೀಡಿದ್ದ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ವೇಳೆ ಆರೋಪಿಗಳು ಪ್ರಯಾಣಿಸಿದ್ದ ಆಟೋ ಸುಳಿವು ಪತ್ತೆಹಚ್ಚಿ ಚಾಲಕನ ಮೊಬೈಲ್ ಪಡೆದು ಪರಿಶೀಲನೆ ಮಾಡಿದಾಗ, ಆರೋಪಿ ಅಕ್ಬರ್ ಅಂದು ತನ್ನ ಪತ್ನಿ ಮುಬೀನಾಳ ಜತೆಗೆ ಮಾತನಾಡಿದ್ದ ಕರೆ ರೆಕಾರ್ಡ್ ಆಗಿರುವುದು ಕಂಡು ಬಂದಿದೆ. ಬಳಿಕ ಮುಬೀನಾಳ ಮೊಬೈಲ್ ಸಂಖ್ಯೆ ಆಧರಿಸಿ ದೆಹಲಿ ಮತ್ತು ಉತ್ತರಪ್ರದೇಶಕ್ಕೆ ತೆರಳಿದ ಸಂಜಯನಗರ ಪೊಲೀಸರು, ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಆರೋಪಿ ದಂಪತಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.