ಯಲಹಂಕ ಉಪನಗರದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದ್ದ ಅ‍ವಳಿ ಕೊಲೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

 ಬೆಂಗಳೂರು : ಯಲಹಂಕ ಉಪನಗರದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದ್ದ ಅ‍ವಳಿ ಕೊಲೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಅವಳಿ ಕೊಲೆ ಪ್ರಕರಣದ ಕುರಿತು ಎಲ್ಲ ಆಯಾಮದಲ್ಲೂ ತನಿಖೆ ನಡೆದಿದೆ. ಕೃತ್ಯ ಹಿಂದೆ ಬೇರೆ ಕಾರಣಗಳು ಕಂಡು ಬರುತ್ತಿವೆ. ಪ್ರಾಥಮಿಕ ಹಂತದಲ್ಲಿ ಊಹಿಸಿದಕ್ಕಿಂತ ಬೇರೆ ರೀತಿಯ ಕಾರಣಗಳಿವೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಮಹಮ್ಮದ್ ಸುಜಿತ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಈ ಘಟನಾ ಸ್ಥಳದ ಸಮೀಪ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲಿಸಲಾಗಿದೆ. ತಪ್ಪಿಸಿಕೊಂಡಿರುವ ಆರೋಪಿಗಳಿಗೆ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಡಿಸಿಪಿ ಹೇಳಿದ್ದಾರೆ.

ಯಲಹಂಕ ಉಪನಗರದ 4ನೇ ಹಂತದ ಖಾಸಗಿ ಕಂಪನಿ ಸೆಕ್ಯುರಿಟಿ ಗಾರ್ಡ್‌ ನೇಪಾಳ ಮೂಲದ ಬಿಕ್ರಂ (21) ಹಾಗೂ ಬಿಹಾರ ರಾಜ್ಯದ ವಾಹನ ಚಾಲಕ ಚೋಟು ತೂರಿ (34) ಮೇಲೆ ಹಲ್ಲೆ ನಡೆಸಿ ದುಷ್ಕರ್ಮಿಗಳು ಕೊಂದು ಪರಾರಿಯಾಗಿದ್ದಾರೆ. ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದಲ್ಲಿ ಪರಿಚಯಸ್ಥರೇ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.