ಸಾರಾಂಶ
ಬೆಂಗಳೂರು : ಕದ್ದ ಮೊಬೈಲ್ ಫೋನ್ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೊಬ್ಬ ಬೈಯಪ್ಪನಹಳ್ಳಿ ಪೊಲೀಸರು ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮಹದೇವಪುರದ ಸಾಗರ್(21) ಬಂಧಿತ. ಆರೋಪಿಯಿಂದ ₹2 ಲಕ್ಷ ಮೌಲ್ಯದ 18 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕಗ್ಗದಾಸನಪುರ ಬಾಲಾಜಿ ಲೇಔಟ್‌ನ ನಿರ್ಮಾಣ ಹಂತದ ಕಟ್ಟಡವೊಂದರ ಕಾರ್ಮಿಕರ ಶೆಡ್‌ನಲ್ಲಿ ಕಾರ್ಮಿಕನೊಬ್ಬನ ಮೊಬೈಲ್ ಕಳುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ನೇಪಾಳ ಮೂಲದ ಸಾಗರ್ ಕೆಲ ವರ್ಷಗಳ ಹಿಂದೆ ಉದ್ಯೋಗ ಅರಸಿ ತಂದೆ ಜತೆಗೆ ನಗರಕ್ಕೆ ಬಂದಿದ್ದು, ಮಹದೇವಪುರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದಾನೆ. ಆರೋಪಿಯು ಮಹದೇವಪುರ, ಬೈಯಪ್ಪನಹಳ್ಳಿ ವ್ಯಾಪ್ತಿಯಲ್ಲಿ ಓಡಾಡಿಕೊಂಡು ಕಿಟಕಿ ತೆರೆದಿರುವ ಮನೆಗಳು ಹಾಗೂ ಜನಜಂಗುಳಿ ಇರುವ ಪ್ರದೇಶಗಳಲ್ಲಿ ಸಾರ್ವಜನಿಕರ ಮೊಬೈಲ್ ಕಳುವು ಮಾಡುತ್ತಿದ್ದ. ಇತ್ತೀಚೆಗೆ ಕಾರ್ಮಿಕರ ಶೆಡ್‌ನಲ್ಲಿ ಕಳವು ಮಾಡಿದ್ದ ಮೊಬೈಲ್ ಫೋನನ್ನು ಬೆನ್ನಿಗಾನಹಳ್ಳಿಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ.
ವಕೀಲನ ಮೇಲೆ ಹಲ್ಲೆ ಮಾಡಿ ಸರ ಸುಲಿಗೆ ಮಾಡಿದ್ದ ಇಬ್ಬರು ಅಂದರ್‌ಕನ್ನಡಪ್ರಭ ವಾರ್ತೆ ಬೆಂಗಳೂರುವಕೀಲರೊಬ್ಬರ ಮೇಲೆ ಹಲ್ಲೆ ಮಾಡಿ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ವಿಘ್ನೇಶ್ವರನಗರ ನಿವಾಸಿ ಜೀವನ್(26) ಮತ್ತು ಉಲ್ಲಾಳ ಮುಖ್ಯರಸ್ತೆ ನಿವಾಸಿ ನಿತಿನ್(24) ಬಂಧಿತರು.
ಆರೋಪಿಗಳಿಂದ ದ್ವಿಚಕ್ರ ವಾಹನ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಶ್ರೀನಿವಾಸನಗರ ನಿವಾಸಿ ವಕೀಲ ಹೇಮಂತ್ ಭಾರಧ್ವಜ್(28) ಎಂಬುವವರು ಮೇ 3ರಂದು ರಾತ್ರಿ ಸುಮಾರು 11.20ಕ್ಕೆ ಶ್ರೀನಿವಾಸನಗರದ ಆರಾಧಾನಾ ಗಾರ್ಮೆಂಟ್ಸ್ ಬಳಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಏಕಾಏಕಿ ಹೇಮಂತ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಹೇಮಂತ್ ಮೇಲೆ ಮನಬಂದಂತೆ ಹಲ್ಲೆಗೈದು 40 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.