₹1.28 ಕೋಟಿಯ ನಕಲಿ ಬ್ರಾಂಡೆಡ್‌ಬಟ್ಟೆಗಳ ಜಪ್ತಿ: ಆರೋಪಿಯ ಬಂಧನ

| Published : Jul 03 2024, 01:15 AM IST

₹1.28 ಕೋಟಿಯ ನಕಲಿ ಬ್ರಾಂಡೆಡ್‌ಬಟ್ಟೆಗಳ ಜಪ್ತಿ: ಆರೋಪಿಯ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಕಳಪೆ ಗುಣಮಟ್ಟದ ಬಟ್ಟೆಗಳನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ಮಾಡಿರುವ ಸಿಸಿಬಿ ಪೊಲೀಸರು, ಆರೋಪಿಯನ್ನು ಬಂಧಿಸಿ ಬರೋಬ್ಬರಿ ₹1.38 ಕೋಟಿ ಮೌಲ್ಯದ ಬಟ್ಟೆಗಳನ್ನು ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಕಳಪೆ ಗುಣಮಟ್ಟದ ಬಟ್ಟೆಗಳನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ಮಾಡಿರುವ ಸಿಸಿಬಿ ಪೊಲೀಸರು, ಆರೋಪಿಯನ್ನು ಬಂಧಿಸಿ ಬರೋಬ್ಬರಿ ₹1.38 ಕೋಟಿ ಮೌಲ್ಯದ ಬಟ್ಟೆಗಳನ್ನು ಜಪ್ತಿ ಮಾಡಿದ್ದಾರೆ.

ರಾಜರಾಜೇಶ್ವರಿನಗರ ನಿವಾಸಿ ನರಸಿಂಹರಾಜು (38) ಬಂಧಿತ. ಆರೋಪಿ ಪ್ರತಿಷ್ಠಿತ ನೈಕಿ, ಪೂಮಾ, ಟಾಮಿ ಹಿಲ್ಫಿಗರ್‌, ಅಂಡರ್‌ ಆರ್ಮರ್‌, ಅಡಿಡಾಸ್‌, ಜರಾ ಕಂಪನಿಗಳ ಹೆಸರಿನಲ್ಲಿ ಕಳಪೆ ಗುಣಮಟ್ಟದ ಬಟ್ಟೆಗಳನ್ನು ಬ್ರ್ಯಾಂಡೆಟ್‌ ಬಟ್ಟೆಗಳೆಂದು ಗ್ರಾಹಕರನ್ನು ನಂಬಿಸಿ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬಿಎಂಎಲ್‌ ಲೇಔಟ್‌ನ ಅಂಗಡಿ ಮೇಲೆ ದಾಳಿ ಮಾಡಿದ್ದಾರೆ.

ದಾಳಿ ವೇಳೆ ಆರೋಪಿಯು ಕಳಪೆ ಗುಣಮಟ್ಟದ ಬಟ್ಟೆಗಳನ್ನು ಪ್ರತಿಷ್ಠಿತ ಕಂಪನಿಗಳ ಬಟ್ಟೆಗಳೆಂದು ನಂಬಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅಂಗಡಿ ಮಾಲೀಕ ನರಸಿಂಹರಾಜು ಎಂಬಾತನನ್ನು ಬಂಧಿಸಿ ಕಳಪೆ ಬಟ್ಟೆಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಕಾಪಿ ರೈಟ್ಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.