ನೈಸ್‌ ರಸ್ತೆಯಲ್ಲಿ ಸರಣಿ ಅಪಘಾತ: ಲಾರಿ ಚಾಲಕನ ಪಾದ ತಂಡು

| Published : Feb 24 2024, 02:34 AM IST / Updated: Feb 24 2024, 04:50 PM IST

Accident

ಸಾರಾಂಶ

ನೈಸ್‌ ರಸ್ತೆಯಲ್ಲಿ ನಡೆದ ಸರಣಿ ಅಪಘಾತದಲ್ಲಿ ಲಾರಿಯೊಂದು ಉರುಳಿ ಬಿದ್ದ ಪರಿಣಾಮ ಚಾಲಕನ ಕಾಲಿನ ಪಾದ ತುಂಡಾಗಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನೈಸ್‌ ರಸ್ತೆಯಲ್ಲಿ ನಡೆದ ಸರಣಿ ಅಪಘಾತದಲ್ಲಿ ಲಾರಿಯೊಂದು ಉರುಳಿ ಬಿದ್ದ ಪರಿಣಾಮ ಚಾಲಕನ ಕಾಲಿನ ಪಾದ ತುಂಡಾಗಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಲಾರಿ ಚಾಲಕ ಮುಕ್ಮುಲ್‌ ಕಾಲು ತುಂಡಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ನೈಸ್‌ ರಸ್ತೆಯ ಮಂಗನಹಳ್ಳಿ ಬಳಿ ಗುರುವಾರ ತಡರಾತ್ರಿ ಈ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು, ಎರಡು ಲಾರಿ ಸೇರಿದಂತೆ ನಾಲ್ಕೈದು ವಾಹನಗಳಿಗೆ ಹಾನಿಯಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನೈಸ್‌ ರಸ್ತೆಯಲ್ಲಿ ಲಾರಿಯೊಂದು ಏಕಾಏಕಿ ಬ್ರೇಕ್‌ ಹಾಕಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಖಾಸಗಿ ಕಂಪನಿಯ ಹಾಲಿನ ಉತ್ಪನ್ನಗಳನ್ನು ಮುಕ್ಮುಲ್‌ ಲಾರಿಯಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಲಾರಿ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಚಾಲಕ ಮುಕ್ಮುಲ್‌ ಕಾಲಿನ ಪಾದ ತುಂಡಾಗಿದೆ. ಕೂಡಲೇ ಸ್ಥಳೀಯರು ಗಾಯಾಳುವಿನ ನೆರವಿಗೆ ಧಾವಿಸಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ಸರಣಿ ಅಪಘಾತದಿಂದ ನೈಸ್‌ ರಸ್ತೆಯಲ್ಲಿ ಕೆಲ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಸಂಚಾರ ಪೊಲೀಸರು, ಕ್ರೇನ್‌ ಸಹಾಯದಿಂದ ಲಾರಿಯನ್ನು ತೆರವುಗೊಳಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.