ಸಾರಾಂಶ
ಬೆಂಗಳೂರು : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 94.73 ಕೋಟಿ ರು. ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ಸೋಮವಾರ ನಿಗಮದ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿ, ಕೆಲ ಮಹತ್ವದ ದಾಖಲೆ ಜಪ್ತಿ ಮಾಡಿದ್ದಾರೆ.ವಸಂತನಗರದ ಜಸ್ಮಾದೇವಿ ಭವನ ರಸ್ತೆಯ ಖಾದಿ ಭವನ 3ನೇ ಮಹಡಿಯಲ್ಲಿ ನಿಗಮದ ಕೇಂದ್ರ ಕಚೇರಿ ಇದೆ. ಈ ಕಚೇರಿ ಮೇಲೆ ಎಸ್‌ಐಟಿ ಅಧಿಕಾರಿಗಳು ಶನಿವಾರವಷ್ಟೇ ದಾಳಿ ಮಾಡಿ ಕೆಲ ಮಹತ್ವದ ದಾಖಲೆ ಜಪ್ತಿ ಮಾಡಿದ್ದರು. ಸೋಮವಾರ ಎರಡನೇ ಬಾರಿ ದಾಳಿ ಮಾಡಿ ಮತ್ತಷ್ಟು ದಾಖಲೆ ವಶಕ್ಕೆ ಪಡೆದಿದ್ದಾರೆ.
ಸ್ಥಳ ಮಹಜರು:
ಪ್ರಕರಣ ಸಂಬಂಧ ಈಗಾಗಲೇ ಎಸ್‌ಐಟಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಮತ್ತು ಲೆಕ್ಕಾಧಿಕಾರಿ ಪರಶುರಾಮ್ ದುಗ್ಗಣ್ಣನವರ್ ಬಂಧಿಸಿ, ಆರು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ. ಸೋಮವಾರ ಇಬ್ಬರು ಆರೋಪಿಗಳನ್ನು ನಿಗಮದ ಕೇಂದ್ರ ಕಚೇರಿಗೆ ಕರೆತಂದು ಸ್ಥಳ ಮಹಜರು ನಡೆಸಿದೆ. ಇವರ ಸಮ್ಮುಖದಲ್ಲೇ ಹಣ ವರ್ಗಾವಣೆ ಸಂಬಂಧ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ ಎನ್ನಲಾಗಿದೆ.
ವ್ಯವಹಾರದ ಬಗ್ಗೆ ಆಡಿಟಿಂಗ್:
ನಿಗಮದ ಖಾತೆಯಿಂದ 94.73 ಕೋಟಿ ರು. ಹಣ ಅಕ್ರಮವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ನಿಗಮದ ಹಣಕಾಸು ವ್ಯವಹಾರದ ಬಗ್ಗೆ ಆಡಿಟಿಂಗ್ ಮಾಡಿಸುವ ಸಾಧ್ಯತೆಯಿದೆ. ಹಣಕಾಸು ವಂಚನೆ, ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ಹಣದ ವಹಿವಾಟಿನ ಬಗ್ಗೆ ಖಚಿತ ಮಾಹಿತಿ ಪಡೆಯಲು ತನಿಖಾ ಸಂಸ್ಥೆಗಳು ಮೂರನೇ ವ್ಯಕ್ತಿಯಿಂದ ಆಡಿಟ್ ಮಾಡಿಸುವುದು ಸಾಮಾನ್ಯವಾಗಿದೆ. ಹೀಗಾಗಿ ನಿಗಮದ ಅಕ್ರಮ ಹಣ ವರ್ಗಾವಣೆ ಸಂಬಂಧವೂ ಎಸ್ಐಟಿ ಆಡಿಟ್ ಮಾಡಿಸಲು ಸಿದ್ಧತೆ ನಡೆಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕಿರಿಯ ಲೆಕ್ಕಾಧಿಕಾರಿ ಪ್ರಮುಖ ಪಾತ್ರ?
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿಗಮದ ಕಿರಿಯ ಲೆಕ್ಕಾಧಿಕಾರಿ ಶಿವಕುಮಾರ್ ಎಂಬಾತ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ. ಈ ಶಿವಕುಮಾರ್ ಮೂಲಕ ಬ್ಯಾಂಕ್ ವ್ಯವಹಾರ ನಡೆದಿದೆ. ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್ ಇಂಡಿಯಾ ಶಾಖೆಗೆ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಬರೆದಿರುವ ಪತ್ರದಲ್ಲಿ ಈ ಶಿವಕುಮಾರ್ ಹೆಸರು ಪ್ರಸ್ತಾಪಿಸಿದ್ದಾರೆ. ನಿಗಮದ ಖಾತೆಗೆ ಸಂಬಂಧಿಸಿದ ಚೆಕ್ ಸ್ವೀಕಾರ, ಠೇವಣಿ ರಶೀದಿ ಪಡೆಯಲು, ಒವರ್ ಡ್ರಾಫ್ಟ್ ದಾಖಲೆ ಸೇರಿದಂತೆ ಇತರೆ ದಾಖಲೆ ಪಡೆಯಲು ಈ ಶಿವಕುಮಾರ್‌ಗೆ ಅಧಿಕಾರ ನೀಡಲಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಈ ಶಿವಕುಮಾರ್ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.