ಇರ್ಕನ್ ಸೋಲಾರ್ ಕಂಪನಿ ಬೆಂಬಲಿಗರಿಂದ ಪ್ರಾಣ ಬೆದರಿಕೆ
KannadaprabhaNewsNetwork | Published : Oct 30 2023, 12:30 AM IST
ಇರ್ಕನ್ ಸೋಲಾರ್ ಕಂಪನಿ ಬೆಂಬಲಿಗರಿಂದ ಪ್ರಾಣ ಬೆದರಿಕೆ
ಸಾರಾಂಶ
18ಎಕರೆ ಜಮೀನು ಕಬಳಿಸಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ । ದೂರು ಸಲ್ಲಿಸಿದರೂ ಕ್ರಮ ಜರುಗಿಸದ ಪೊಲೀಸರು । ವಾರಸುದಾರೆ ಲಾವಣ್ಯ ಆಳಲು
ಕನ್ನಡಪ್ರಭವಾರ್ತೆ ಪಾವಗಡ ಉಪ ನೋಂದಣಾಧಿಕಾರಿಯ ಕಚೇರಿಯ ಎಡವಟ್ಟಿನಿಂದ ನನ್ನ ಹಾಗೂ ನನ್ನ ಪತಿಯಿಂದ ಕಳೆದ ಆರೇಳು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದ ಎರಡನೇ ಪತ್ನಿ ನಳಿನಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ 18 ಎಕರೆ ಜಮೀನು ಕಬಳಿಕೆಗೆ ಮುಂದಾದ ವಿಚಾರಕ್ಕೆ ಸಂಬಂಧ ಪ್ರಶ್ನಿಸಿದ್ದಕ್ಕೆ ಸ್ಥಳೀಯ ಖಾಸಗಿ ಇರ್ಕನ್ ಸೋಲಾರ್ ವಿದ್ಯುತ್ ಉತ್ಪಾದನೆಯ ಪಾರ್ಕ್ ಬೆಂಬಲಿಗರು ಪ್ರಾಣಬೆದರಿಕೆ ಹಾಕಿದ್ದಾರೆ ಎಂದು ಜಮೀನು ವಾರಸುದಾರೆ ಲಾವಣ್ಯ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ದೂರು ಸಲ್ಲಿಸಿ ನಾಲ್ಕು ದಿನ ಕಳೆದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ತಿರುಮಣಿ ಪೊಲೀಸರು ಮೀನಾಮೇಷ ಎಣಿಸುವ ಕಾರಣ ಭಯ ಭೀತಿಗೊಂಡಿರುವುದಾಗಿ ಸಂತ್ರಸ್ತೆ ಲಾವಣ್ಯ ನಾಗಮೋಹನ್‌ರೆಡ್ಡಿ ಹೇಳಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಸಂತ್ರಸ್ತೆ ಲಾವಣ್ಯ ಮಾತನಾಡಿ, ನಾಗಲಮಡಿಕೆ ಹೋಬಳಿಯ ವಳ್ಳೂರು ಗ್ರಾಮದ ವಾಸಿಯಾಗಿದ್ದು, ಆನಾರೋಗ್ಯದ ನಿಮಿತ್ತ ಚಿಕಿತ್ಸೆ ಫಲಕಾರಿಯಾಗದೇ ಕಳೆದ ಏಳು ವರ್ಷಗಳ ಹಿಂದೆ ಪತಿ ನಾಗಮೋಹನ್‌ರೆಡ್ಡಿ ನಿಧನರಾಗಿದ್ದಾರೆ. ಸೋಲಾರ್ ಪಾರ್ಕ್ ನಿರ್ಮಿಸಲು ನಮ್ಮ ಹೆಸರಿಗೆ ಇರುವ 18ಎಕರೆ ಜಮೀನು ಕಬಳಿಸಲು ಇರ್ಕನ್ ಖಾಸಗಿ ಸೋಲಾರ್ ಕಂಪನಿಯೊಂದರ ಅಧಿಕಾರಿಗಳು ಮುಂದಾಗಿದ್ದು, ಅಧಿಕಾರಿ ಹಾಗೂ ಮಧ್ಯವರ್ತಿಗಳ ಶಾಮೀಲಿನೊಂದಿಗೆ ನಮ್ಮ ಸಹಿ ಇಲ್ಲದೇ ಜಮೀನಿನ ನೋಂದಣಿ ಪ್ರಕ್ರಿಯೆ ನೆಡೆಸಿ ವಂಚಿಸಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ನಾನು ಮತ್ತು ನನ್ನ ಮಗ ಜಶ್ವಂತ ರೆಡ್ಡಿ ಸೆ.20 ಹಾಗೂ ಆ,13ರಂದು ಸಬ್ ರಿಜಿಸ್ಟರ್ ಕಚೇರಿಗೆ ಹೋಗಿರಲಿಲ್ಲ. ಆದರೂ, ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ವಳ್ಳೂರು ಗ್ರಾಮದ ಸರ್ವೇ ನಂಬರ್ 63/2ರ ನಮ್ಮ ಜಮೀನು ವಿಭಾಗದ ಪ್ರಕ್ರಿಯೆ ನಡೆಸಿದ್ದು, ನಮಗೆ ಸೇರಿದ್ದ 18ಎಕರೆ ಪೈಕಿ ಈಗಾಗಲೇ ನನ್ನ ಪತಿ ನಾಗಮೋಹನ್‌ರೆಡ್ಡಿಯಿಂದ ನಿಯಮನುಸಾರ ವಿಚ್ಛೇದನ ಪಡೆದಿದ್ದ ನಳಿನಿ ಮತ್ತು ಲಾವಣ್ಯ ಎಂಬ ನನ್ನ ಹೆಸರಿಗೆ ತಲಾ 9ಎಕರೆ ವಿಭಾಗವಾದಂತೆ ಸುಳ್ಳು ದಾಖಲೆ ಸೃಷ್ಟಿಸಿದ್ದು, ಜಮೀನು ವಿಭಾಗಕ್ಕೆ ಸಂಬಂಧಪಟ್ಟಂತೆ ಸರ್ವೇ ಇಲಾಖೆಯಿಂದ 11ಇ ನಕ್ಷೆ ಮಾಡಿಸದೇ ನಮ್ಮಲ್ಲರ ಸಹಿ ಹಾಗೂ ನಮ್ಮಗಳ ಹೆಬ್ಬೆಟ್ಟು ಗುರುತು ದಾಖಲಾತಿಗಳಲ್ಲಿ ನಮೂದಿಸಿ, ನಕಲಿ ದಾಖಲೆ ಸೃಷ್ಟಿ ಮಾಡಿರುವುದಾಗಿ ಆರೋಪಿಸಿದ್ದಾರೆ. ನಮ್ಮ ಗೈರಿನಲ್ಲಿ ಜಮೀನಿನ ವಿಭಾಗದ ಪ್ರಕ್ರಿಯೆ ನಡೆಸಿದ್ದಾರೆ. ನಕಲಿ ದಾಖಲೆಗಳ ಸೃಷ್ಟಿ ಕುರಿತು ನಿಖರ ಮತ್ತು ಸಂಪೂರ್ಣ ಸತ್ಯವಾದ ವಿಚಾರ ಹೊರ ಬರಬೇಕು. ಈ ಸಂಬಂಧ ನೋಂದಣಿ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ಏನು ತಪ್ಪು ಮಾಡಿದ್ದಾರೆಂಬ ಸತ್ಯ ಗೊತ್ತಾಗಬೇಕು. ನಕಲಿ ದಾಖಲೆಗಳಿಗೆ ಕುಮ್ಮಕ್ಕು ನೀಡಿದ ಇರ್ಕನ್ ಸೋಲಾರ್ ಪಾರ್ಕ್‌ನ ಬೆಂಬಲಿಗರ ವಿರುದ್ಧ ಸೂಕ್ತ ಕ್ರಮ ಜರಿಗಿಸಬೇಕೆಂದು ಅವರು ಒತ್ತಾಯಿಸಿ, 18ಎಕರೆ ಜಮೀನಿನ ವಿಭಾಗ ಪತ್ರ ಅಕ್ರಮ ಸೃಷ್ಟಿಗೆ ಒಳಪಟ್ಟಿದ್ದ ಹಿನ್ನೆಲೆಯಲ್ಲಿ ಜಮೀನಿನ ವಿಭಾಗ ಪತ್ರದ ಆಧಾರದ ಮೇಲೆ ಯಾವುದೇ ರೀತಿಯ ಕಂದಾಯ ದಾಖಲೆಗಳನ್ನು ಬದಲಾವಣೆ ಹಾಗೂ ಇತರೆ ದಾಖಲೆ ಸೃಷ್ಟಿಸದಂತೆ ಆ.13ರಂದು ತಹಸೀಲ್ದಾರ್ ಕಚೇರಿಗೆ ಜಮೀನಿನ ದಾಖಲೆಗಳ ಸಮೇತ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಜಮೀನಿನ ನಕಲಿ ದಾಖಲೆಗಳ ಸೃಷ್ಟಿ ಕುರಿತು ಸಮಗ್ರ ತನಿಖೆ ಹಾಗೂ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಂತೆ ಜಿಲ್ಲಾಧಿಕಾರಿ ಹಾಗೂ ರಾಜ್ಯ ಹಾಗೂ ಜಿಲ್ಲಾ ಲೋಕಾಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಲಾಗಿದೆ. ಅಕ್ರಮ ದಾಖಲೆಗಳ ಪರಿರ್ವನೆ ಕುರಿತು ತನಿಖೆಗೆ ಒಳಪಡಿಸಿದ್ದ ಬೆನ್ನಲ್ಲೆ ಇರ್ಕನ್ ಕಂಪನಿಯ ಸೋಲಾರ್ ಕಂಪನಿಯ ಬೆಂಬಲಿಗರು ಹಾಗೂ ಮಧ್ಯ ವರ್ತಿಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. ಈ ಸಂಬಂಧ ಕಳೆದ ನಾಲೈದು ದಿನಗಳ ಹಿಂದೆ ತಿರುಮಣಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪಿಎಸ್‌ಐ ದೂರು ದಾಖಲಿಸದೇ ಕ್ರಮ ಜರಿಗಿಸಲು ಮೀನಾಮೇಷ ಹಾಕುತ್ತಿರುವ ಪರಿಣಾಮ ನಾನು, ನಮ್ಮ ಪುತ್ರ ಭಯದ ನೆರಳಲ್ಲಿ ಬದುಕುತ್ತಿದ್ದೇವೆ. ಪ್ರಾಣ ಬೆದರಿಕೆ ಕುರಿತು ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾಧಿಕಾರಿಗೆ ಮನವಿ ಮಾಡಿರುವುದಾಗಿ ಹೇಳಿದರು. ಹೇಳಿಕೆ: ಹಿರಿಯ ಮುಖಂಡ ವಳ್ಳೂರು ಚನ್ನಕೇಶವರೆಡ್ಡಿ ಮಾತನಾಡಿ, ಕಳೆದ ಆರೇಳು ವರ್ಷಗಳ ಹಿಂದೆ ಜಮೀನು ಮಾಲೀಕ ಲಾವಣ್ಯ ಪತಿ ನಾಗಮೋಹನ್‌ರೆಡ್ಡಿ ನಿಧನರಾಗಿದ್ದು, 10ವರ್ಷಗಳ ಕಾಲ ಉಳಿಮೆ ಮಾಡಲು ಜಮೀನು ಗುತ್ತಿಗೆ ನೀಡಿದ್ದರು. ಈ ಸಂಬಂಧ ಅಗತ್ಯ ದಾಖಲೆಗಳಿವೆ. ಸೋಲಾರ್ ಪಾರ್ಕ್ ನಿರ್ಮಿಸಲು ಜಮೀನು ಖರೀದಿಸಲು ಹಾಲಿ ಪತ್ನಿ ಲಾವಣ್ಯ ಹಾಗೂ ವಿಚ್ಛೇದಿತ ಪತ್ನಿ ನಳಿನಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಯಾಗಿವೆ. ಈ ಸಂಬಂಧ ಗುತ್ತಿಗೆ ಕರಾರಿನ ಮೇಲೆ ನ್ಯಾಯಾಲಯಕ್ಕೆ ದಾವೆ ಹೂಡಿದ್ದು ಜಮೀನು ಮಾಲೀಕರಾದ ಲಾವಣ್ಯ ಅವರು ಸೋಲಾರ್ ಪಾರ್ಕ್‌ನ ಕೆಲ ಬೆಂಬಲಿಗರಿಂದ ಬೆದರಿಕೆಗೆ ಸಂಬಂಧಪಟ್ಟಂತೆ ಮಾಜಿ ಸಚಿವ ವೆಂಕಟರಮಣಪ್ಪ ಹೇಳಿದರೂ ತಿರುಮಣಿ ಪೊಲೀಸರು ಸೂಕ್ತ ಕ್ರಮ ಜರಿಗಿಸುತ್ತಿಲ್ಲ ಎಂದು ಹಿರಿಯ ಮುಖಂಡ ಮಾಜಿ ಎಪಿಎಂಸಿ ಅಧ್ಯಕ್ಷರಾದ ವಳ್ಳೂರು ವಿ.ಸಿ.ಚನ್ನಕೇಶವರೆಡ್ಡಿ ತಿಳಿಸಿದ್ದಾರೆ. ಪಿಎಸ್‌ಐ ಹೇಳಿಕೆ: ನಕಲಿ ದಾಖಲಾತಿ ಸೃಷ್ಟಿ ವಿಚಾರವಾಗಿ ಸೋಲಾರ್ ಪಾರ್ಕ್ ಬೆಂಬಲಿಗರಿಂದ ಪ್ರಾಣ ಬೆದರಿಕೆಯ ವಿಚಾರವಾಗಿ ಲಾವಣ್ಯ ದೂರು ಸಲ್ಲಿಸಿದ್ದು ಸೂಕ್ತ ಕ್ರಮವಹಿಸುವುದಾಗಿ ತಿರುಮಣಿ ಪೊಲೀಸ್ ಠಾಣೆಯ ಪಿಎಸ್‌ಐ ಲಕ್ಷ್ಮಣ್ ತಿಳಿಸಿದ್ದಾರೆ. ಕಂದಾಯ ಇಲಾಖೆಯ ಆರ್‌ಐ ಹೇಳಿಕೆ: ವಳ್ಳೂರು ಗ್ರಾಮದ 18ಎಕರೆ ಜಮೀನಿಗೆ ಸಂಬಂಧಪಟ್ಟ ನಕಲಿ ದಾಖಲೆಗಳ ವಿಚಾರವಾಗಿ ನಾಗಮೋಹನ್‌ರೆಡ್ಡಿಯ ಪತ್ನಿ ಲಾವಣ್ಯ ಸಲ್ಲಿಸಿದ್ದ ದೂರಿನ ಮೇರೆಗೆ ದಾಖಲೆ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ನಾಗಲಮಡಿಕೆ ಕಂದಾಯ ಇಲಾಖೆಯ ನಿರೀಕ್ಷಕ (ಆರ್‌ಐ) ರವಿಕುಮಾರ್ ತಿಳಿಸಿದ್ದಾರೆ. ತಾಲುಕು ರೈತ ಸಂಘದ ಅಧ್ಯಕ್ಷ ಪೂಜಾರಪ್ಪ, ಕರಿಯಣ್ಣ ಹಾಗೂ ಇತರೆ ಆನೇಕ ಮಂದಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಫೋಟೋ.... 30ಪಿವಿಡಿ1 ಜಮೀನು ಕಬಳಿಕೆಯ ವಿಚಾರ ನಕಲಿ ದಾಖಲೆ ಸೃಷ್ಟಿ, ಬೆದರಿಕೆ ವಿಚಾರವಾಗಿ ದೂರು ಸಲ್ಲಿಸಿದ್ದರೂ ಸೂಕ್ತ ಕ್ರಮ ಜರಿಗಿಸದ ತಿರುಮಣಿ ಪೊಲೀಸರು ಮಾಧ್ಯಮಗಳ ಜತೆ ಆಳಲು ತೋಡಿಕೊಂಡ ಸಂತ್ರಸ್ತ ಮಹಿಳೆ ಲಾವಣ್ಯ. ಫೋಟೋ 30ಪಿವಿಡಿ2 ಪಾವಗಡ,ಲಾವಣ್ಯಗೆ ಸಂಬಂಧಪಟ್ಟ ಜಮೀನಿನ ನಕಲಿ ದಾಖಲೆ ಸೃಷ್ಟಿ ವಿಚಾರ, ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದ ಮುಖಂಡರಾದ ವಿ.ಸಿ.ಚನ್ನಕೇಶವರೆಡ್ಡಿ,ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಇತರೆ ಆನೇಕ ಮಂದಿ ಬೆಂಬಲಿಗ ಮುಖಂಡರು