ಸಾರಾಂಶ
ಬೆಂಗಳೂರು : ಮಜ್ಜಿಗೆಯಲ್ಲಿ ಮತ್ತು ಭರಿಸುವ ಮದ್ದು ಬೆರೆಸಿ ಪಿಜಿ ಮಾಲಿಕಳ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಕಳವು ಮಾಡಿದ್ದ ಅಡುಗೆ ಕೆಲಸದಾಳು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾಳೆ.
ಹಲಸೂರು ಸಮೀಪದ ರಾಜೇಶ್ವರಿ ಬಂಧಿತಳಾಗಿದ್ದು, ಆರೋಪಿಯಿಂದ 130 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಚಿನ್ನಾಭರಣ ಕಳ್ಳತನ ಬಗ್ಗೆ ಪಿಜಿ ಮಾಲಿಕರು ದೂರು ನೀಡಿದ್ದರು. ಅದರನ್ವಯದ ತನಿಖೆಗಿಳಿದ ಹಲಸೂರು ಪೊಲೀಸರು, ಶಂಕೆ ಮೇರೆಗೆ ರಾಜೇಶ್ವರಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಳ್ಳತನ ಕೃತ್ಯ ಬಯಲಾಗಿದೆ.
ಚಿನ್ನ ಕದ್ದು ಮಾರಾಟ:
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತಿಯಿಂದ ಪ್ರತ್ಯೇಕವಾಗಿದ್ದ ರಾಜೇಶ್ವರಿ, ತಿಂಗಳ ಹಿಂದಷ್ಟೇ ಹಲಸೂರು ಸಮೀಪದ ಪಿಜಿಗೆ ಕೆಲಸಕ್ಕೆ ಸೇರಿದ್ದಳು. ಕೆಲ ದಿನಗಳಲ್ಲೇ ಪಿಜಿ ಮಾಲಿಕೆ ರಾಜೇಶ್ವರಿ ವಿಶ್ವಾಸವನ್ನು ಆಕೆ ಸಂಪಾದಿಸಿದ್ದಳು. ಮಾ.23 ರಂದು ಅನಾರೋಗ್ಯಕ್ಕೆ ತುತ್ತಾಗಿದ್ದ ಪಿಜಿ ಮುಖ್ಯಸ್ಥೆಯ ಕಾಲು ಒತ್ತಿ ಆರೈಕೆ ಮಾಡಿ ಮಜ್ಜಿಗೆಯಲ್ಲಿ ಮತ್ತು ಭರಿಸುವ ಮದ್ದು ಬೆರೆಸಿ ಆಕೆ ಕೊಟ್ಟಿದ್ದಳು.
ಸಂತ್ರಸ್ತೆ ಪ್ರಜ್ಞೆ ತಪ್ಪಿದ ಬಳಿಕ ಕೋಣೆಯಲ್ಲಿದ್ದ 130 ಗ್ರಾಂ ಚಿನ್ನವನ್ನು ಆರೋಪಿ ದೋಚಿದ್ದಳು. ಈ ಆಭರಣಗಳನ್ನು ಪರಿಚಿತ ಚಿನ್ನದ ವ್ಯಾಪಾರಿಗೆ ಮಾರಾಟ ಮಾಡಿ ಹಣ ಪಡೆದು ಬಳಿಕ ಪಿಜಿ ಕೆಲಸಕ್ಕೆ ಆಕೆ ಹಾಜರಾಗಿದ್ದಳು. ಇತ್ತ ಅದೇ ದಿನ ಸಂಜೆ ಚಿನ್ನ ನಾಪತ್ತೆ ಬಗ್ಗೆ ದೂರುದಾರರಿಗೆ ಗೊತ್ತಾಗಿದೆ. ಕೂಡಲೇ ಪಿಜಿ ಕೆಲಸಗಾರರನ್ನು ವಿಚಾರಿಸಿದಾಗ ಯಾರೊಬ್ಬರು ಒಪ್ಪಿಕೊಂಡಿಲ್ಲ.
ಕೊನೆಗೆ ಶಂಕೆ ಮೇರೆಗೆ ರಾಜೇಶ್ವರಿ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಸುಳಿವು ಸಿಕ್ಕಿತು. ಕೃತ್ಯ ನಡೆದ ಮಧ್ಯಾಹ್ನ ಪಿಜಿ ಸಮೀಪದ ಚಿನ್ನಾಭರಣ ಮಳಿಗೆಗೆ ತೆರಳಿ ಆಕೆಯ ಆಭರಣಗಳನ್ನು ಮಾರಾಟ ಮಾಡಿ ಹಣ ಪಡೆದಿದ್ದಳು. ಆ ಚಿನ್ನದ ವ್ಯಾಪಾರಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ರಾಜೇಶ್ವರಿ ಹೆಸರು ಹೇಳಿದ. ಈ ಮಾಹಿತಿ ಮೇರೆಗೆ ಆರೋಪಿಯನ್ನು ಸುಪರ್ದಿಗೆ ಪಡೆದು ಪ್ರಶ್ನಿಸಿದಾಗ ಸತ್ಯ ಒಪ್ಪಿಕೊಂಡಳು ಎಂದು ಪೊಲೀಸರು ತಿಳಿಸಿದ್ದಾರೆ.