ಸಾರಾಂಶ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಿಂಡು ಏಕಾಏಕಿ ದಾಳಿ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡು ವೃದ್ಧೆಯೊಬ್ಬರು ಬುಧವಾರ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಜಾಲಹಳ್ಳಿ ಏರ್‌ಫೋರ್ಸ್ ಕ್ಯಾಂಪಸ್‌ನಲ್ಲಿ ಬುಧವಾರ ಈ ಘಟನೆ ನಡೆದಿದ್ದು, ರಾಜ್ ದುಲಾರಿ ಸಿನ್ಹಾ (76) ಮೃತಪಟ್ಟ ಮಹಿಳೆಯಾಗಿದ್ದಾರೆ.
ಜಾಲಹಳ್ಳಿಯ ಏರ್‌ಫೋರ್ಸ್ ಈಸ್ಟ್ 7ನೇ ರೆಸಿಡೆನ್ಶಿಯಲ್ ಕ್ಯಾಂಪ್‌ನಲ್ಲಿರುವ ಪುಟ್‌ಬಾಲ್ ಮೈದಾನದಲ್ಲಿ ಬೆಳಗ್ಗೆ 6.30 ರ ಸುಮಾರಿಗೆ ವಾಕಿಂಗ್ ಮಾಡುತ್ತಿದ್ದಾಗ ಮಹಿಳೆ ಮೇಲೆ 10-12 ನಾಯಿಗಳು ಏಕಾಏಕಿ ದಾಳಿ ನಡೆಸಿವೆ. ನಾಯಿಗಳ ಹಿಂಡು ವೃದ್ದೆಯ ತಲೆ ಭಾಗದ ಚರ್ಮವನ್ನು ಕಿತ್ತು ಹಾಕಿವೆ. ಮುಖದ ಭಾಗವನ್ನು ಕಚ್ಚಿವೆ, ಬಲಗೈಗೆ ಕಚ್ಚಿ ಗಾಯಗೊಳಿಸಿವೆ.
ಈ ವೇಳೆ ವಾಯುವಿಹಾರ ಮಾಡುತ್ತಿದ್ದ ಏರ್‌ಪೋರ್ಸ್ ಅಧಿಕಾರಿ ಹೇಮಚಂದ್ ಎಂಬುವವರು ಬಂದು ನಾಯಿಗಳನ್ನು ಓಡಿಸಿದ್ದಾರೆ. ಮಹಿಳೆಯ ಅಳಿಯ ಎ.ಕೆ.ಸಿಂಗ್ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಹೇಮಚಂದ್ ಹಾಗೂ ಎ.ಕೆ.ಸಿಂಗ್ ಅವರು ಮಹಿಳೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ನಿವೃತ್ತ ಶಿಕ್ಷಕಿಯಾಗಿರುವ ಮಹಿಳೆ ಅಳಿಯ-ಮಗಳನ್ನು ಭೇಟಿಯಾಗಲು ಬಿಹಾರದಿಂದ ಬೆಂಗಳೂರಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.
ದಾಳಿ ನಡೆಸಿದ ನಾಯಿಗಳು ಎಬಿಸಿ ಕೇಂದ್ರದಲ್ಲಿ ನಿಗಾ
ಘಟನೆ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ದಾಳಿ ನಡೆಸಿದ ನಾಯಿಗಳನ್ನು ಹಿಡಿದು ಎಬಿಸಿ ಕೇಂದ್ರದಲ್ಲಿ ನಿಗಾ ವಹಿಸಲಾಗುತ್ತಿದೆ. ಮೃತ ಮಹಿಳೆಗೆ ಬಿಬಿಎಂಪಿಯಿಂದ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.