ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನರ್ಸಿಂಗ್ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ನಡೆದಿದೆ.ತಾಲೂಕಿನ ಗುನ್ನಾಯಕನಹಳ್ಳಿಯ ಯೋಗಾನಂದ- ಅಶ್ವಿನಿ ದಂಪತಿ ಪುತ್ರಿ ನಿಶ್ಕಲ (21) ಆತ್ಮಹತ್ಯೆ ಮಾಡಿಕೊಂಡವರು.
ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು. ಸಹಪಾಠಿ ಪಕ್ಕದ ರೂಂಗೆ ತೆರಳಿದ್ದ ವೇಳೆ ತಾನು ಉಳಿದುಕೊಂಡಿದ್ದ ಹಾಸ್ಟೆಲ್ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಆತ್ಮಹತ್ಯೆಗೆ ಕಾರಣ ಇನ್ನು ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ 10 ದಿನಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಂತಾಗಿದೆ. ಕೊಪ್ಪಳ ಮೂಲದ ಮೆಡಿಕಲ್ ವಿದ್ಯಾರ್ಥಿ ಭರತ್ ಆತ್ಮಹತ್ಯೆ ಮಾಡಿಕೊಂಡಿದ್ದರು.ಜೂಜು ಅಡ್ಡೆ ಮೇಲೆ ದಾಳಿ: 6 ಮಂದಿ ವಿರುದ್ಧ ಕೇಸು
ಮಳವಳ್ಳಿ:ಪಟ್ಟಣದ ಸುಲ್ತಾನ್ ರಸ್ತೆಯ ಸಮೀಪ ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ಗ್ರಾಮಾಂತರ ಪೊಲೀಸರು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಜೂಜು ನಲ್ಲಿ ತೊಡಗಿದ್ದ ಗುಂಪಿನ ಮೇಲೆ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಶಿವಶಂಕರ್ ನೇತೃತ್ವದ ತಂಡ ದಾಳಿ ಮಾಡಿ ಪಣಕ್ಕಿದ್ದ 4050 ರು. ನಗದು ವಶಪಡಿಸಿಕೊಂಡು ಮೂವರನ್ನು ಬಂಧಿಸಿ ಆರು ಮಂದಿ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಟಮೆಟೋ ಬೆಳೆ ನಾಶ
ಮಳವಳ್ಳಿ:ಕಿಡಿಗೇಡಿಗಳು ಕಟಾವಿಗೆ ಬಂದಿದ್ದ ಟಮೆಟೋ ಬೆಳೆಯನ್ನು ನಾಶ ಮಾಡಿರುವ ಘಟನೆ ತಾಲೂಕಿನ ಹೊಂಬೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಮಾದೇಗೌಡರ ಜಮೀನಿನಲ್ಲಿ ಲಕ್ಷಾಂತರ ರು. ಖರ್ಚು ಮಾಡಿ ಟಮೆಟೋ ಬೆಳೆ ಬೆಳೆದಿದ್ದರು. ಕಟಾವಿಗೆ ಬಂದಿದ್ದ ಟಮೆಟೋ ಬೆಳೆಯನ್ನು ಕಿಡಿಕೇಡಿಗಳು ಶುಕ್ರವಾರ ರಾತ್ರಿ ನಾಶ ಮಾಡಿದ್ದಾರೆ ಎಂದು ರೈತ ಮಾದೇಗೌಡ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.